Uncategorized

ಪಾಕ್​ ಪರ ಪೋಸ್ಟ್; ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪ್ರೇಮ; ಸೋಶಿಯಲ್​ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್​

ವಿಜಯಪುರ: ಆಪರೇಷನ್ ಸಿಂಧೂರದಿಂದ  ಕಂಗೆಟ್ಟಿದ್ದ ಪಾಕ್ ಮತ್ತೆ ಬಾಲ ಬಿಚ್ಚಿದೆ. ಜಮ್ಮು ಕಾಶ್ಮೀರದ ಹಲವೆಡೆ ಮಿಸೈಲ್ ದಾಳಿ ನಡೆಸಿ ಅಟ್ಟಹಾಸ ಮೆರೆದಿದೆ. 35 ನಿಮಿಷ ಡ್ರೋನ್ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದ ಮಿಸೈಲ್​ಗಳನ್ನು S-400 ಮಿಸೈಲ್ ಜೆಟ್ ಹೊಡೆದುರುಳಿಸಿದೆ. ಅತ್ತ ಪಾಕ್​​ ಬಾಲ ಬಿಚ್ಚಿದ್ದಂತೆ ಇತ್ತ ಕರ್ನಾಟದಲ್ಲಿ ಕೆಲ ಪಾಕ್​​ ಪ್ರೇಮಿಗಳು ಕೂಡ ಬಾಲ ಬಿಚ್ಚಿದ್ದಾರೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕಿಸ್ತಾನದ ಜನರ ಪರ ಹಾಗೂ ಅವರ ಸುರಕ್ಷತೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್​​ ಹಂಚಿಕೊಂಡಿದ್ದಾಳೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪೆಹೆಲ್ಗಾಮ್​ನಲ್ಲಿ ಪಾಕ್​​ ಉಗ್ರರಿಂದ 26 ಭಾರತೀಯ ಪ್ರವಾಸಿಗರ ಹತ್ಯೆ ವಿಚಾರವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡುವ ಮೂಲಕ ಭಾರತೀಯ ಸೇನೆ ಈಗಾಗಲೇ ಪ್ರತೀಕಾರ ತೀರಿಸಿಕೊಂಡಿದೆ. ಸದ್ಯ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ಮಧ್ಯೆ ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ತಷಾವುದ್ದ ಫಾರೂಖಿ ಶೇಖ್ ಎಂಬ ವಿದ್ಯಾರ್ಥಿನಿ ಪಾಕಿಸ್ತಾನದ ಪರ ಪೋಸ್ಟ್ ಹರಿಬಿಟ್ಟಿದ್ದಾಳೆ.

ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್​ ‘@hoodyyyyyyy’ ಎಂಬ ಹೆಸರಿನ ಖಾತೆಯಲ್ಲಿ “ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ 200 ಕಿಲೋ ಮೀಟರ್ ಹೋಗಬೇಡಿ. ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸಲಿ ಅಮೀನ್#sos” ಎಂದು ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ತನ್ನ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಕೂಡ ಪೋಸ್ಟ್ ಹಾಕಿದ್ದಾಳೆ.

ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್​ ಪೋಸ್ಟ್ ವೈರಲ್​ ಬೆನ್ನಲ್ಲೇ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಪರ ಸಂಘಟನೆಗಳಿಂದ ಒತ್ತಾಯಿಸಲಾಗಿದೆ. ಬಳಿಕ ಪಿಎಸ್ಐ ವಿನೋದ ದೊಡಮನಿಯಿಂದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಪಾಕ್ ಪರ ಪೋಸ್ಟ್ ಹಾಕಿದ್ದಕ್ಕೆ ದೇಶದ ಸಾರ್ವಭೌಮತ್ವದ ಘನತೆಗೆ ಅಪಾಯಕಾರಿಯಾಗುವ ರೀತಿಯಲ್ಲಿ, ದೇಶದ ಏಕತೆಗೆ ಧಕ್ಕೆ ತರುವಂತಹ ಪೋಸ್ಟ್ ಹಾಕಿದ ಕಾರಣ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ದ ಮೇಲೆ BNS 152. 197.3(5) ಅಡಿ ದೂರು ದಾಖಲಾಗಿದೆ.

ಯೂ ಟರ್ನ್ ಹೊಡೆದ ತಷಾವುದ್ದ 

ಅತ್ತ ದೂರು ದಾಖಲಾಗುತ್ತಿದ್ದಂತೆ ಇತ್ತ ವಿದ್ಯಾರ್ಥಿನಿ ತಷಾವುದ್ದ ಯೂ ಟರ್ನ್ ಹೊಡೆದಿದ್ದಾಳೆ. “ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ನನ್ನ ಕಾಮೆಂಟ್‌ಗೆ ಸಂಬಂಧಿಸಿದೆ ಅದು ಕೆಲವರನ್ನು ನೋಯಿಸಿದೆ. ಮನನೊಂದಿರುವ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ಇದು ನನ್ನ ತಾಯ್ನಾಡು. ಭಾರತದಲ್ಲಿ ಹುಟ್ಟಿ ಬೆಳೆದದ್ದು. ನಾನು ಕಮೆಂಟ್ ಮಾಡಿದ್ದು ಮೂರ್ಖತನದ ಕೃತ್ಯವಾಗಿದೆ ಮತ್ತೊಮ್ಮೆ! ನಿಜವಾಗಿಯೂ ಎಲ್ಲರಿಗೂ ಕ್ಷಮೆಯಾಚಿಸುವೆ. ಮುಂದೆ ನಾನು ಎಂದಿಗೂ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಖಚಿತಪಡಿಸಿತ್ತೇನೆ. ಜೈ ಹಿಂದ್” ಎಂದು ಪೋಸ್ಟ್ ಮಾಡಿದ್ದಾಳೆ. ಸದ್ಯ ತಷಾವುದ್ದ ಮುಂಬೈನಲ್ಲಿರುವ ಮಾಹಿತಿ ಇದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button