
ಸ್ವಸಹಾಯ ಸಂಘಗಳು ಮಹಿಳಾ ಸಶಕ್ತಿಕರಣದೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕೆಂದು ರಾಜ್ಯಪಾಲರಾದ ಥಾವರ್’ಚಂದ್ ಗೆಹ್ಲೋತ್ ಹೇಳಿದರು. ಮಂಗಳೂರಿನ ಬಂಗ್ರ ಕೂಳೂರು ಗೋಲ್ಡನ್ ಫಿಂಚ್ ಸಿಟಿಯಲ್ಲಿ ಇಂದು ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಮತ್ತು ಉಪ ಮುಖ್ಯ ಮಂತ್ರಿ ಡಿಕೆ. ಶಿವ ಕುಮಾರ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರು ಸಹಕಾರಿ ಧ್ವಜವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ರಜತ ಸಂಭ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ಥಾಪನೆಯಾದ ನವೋದಯ ಸ್ವ ಸಹಾಯ ಗುಂಪುಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿದೆ. ದೇಶದ ಯೋಧರ ಕಲ್ಯಾಣ ನಿಧಿಗೆ ರಾಜೇಂದ್ರ ಕುಮಾರ್ ಅವರು 3 ಕೋಟಿ ರೂ. ದೇಣಿಗೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ನವೋದಯ ಸ್ವ ಸಹಾಯ ಸಂಘಗಳ ಮೂಲಕ ಲಕ್ಷಾಂತರ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಆರ್ಥಿಕ ಬದಲಾವಣೆ ಮಹಿಳೆಯರ ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ನವೋದಯ ಸ್ವ ಸಹಾಯ ಸಂಘಗಳ ಮೂಲಕ ನವಯುಗದ ಆರಂಭವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ರಂಗ ಮಹತ್ವದ ಕೊಡುಗೆ ನೀಡುತ್ತಿದೆ. ಮಹಿಳೆಯರು ಸರಕಾರದ ದೀನ್ ದಯಾಳ್ ಯೋಜನೆ ಸೇರಿದಂತೆ ಸರಕಾರದ ಯೋಜನೆಯ ಪ್ರಯೋಜನ ಪಡೆದು ಆತ್ಮನಿರ್ಭರ ಭಾರತಕ್ಕೆ ಕೊಡುಗೆನೀಡುವಂತಾಗಬೇಕು ಎಂದರು.
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವ ಕುಮಾರ್ 25 ವರ್ಷಗಳ ಹಿಂದೆ ತಾನು ಸಹಕಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನವೋದಯ ಸ್ವ ಸಹಾಯ ಸಂಘಗಳ ಉದ್ಘಾಟಿಸಿದ್ದೆ ಎಂದು ಸ್ಮರಿಸಿದರು. ಹೆಣ್ಣು ಕುಟುಂಬದ ಕಣ್ಣು ಎಂದು ಸ್ತ್ರೀ ಶಕ್ತಿ ಗುಂಪುಗಳನ್ನು ಸರಕಾರ ಆರಂಭಿಸಿತ್ತು. ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ದೊಡ್ಡ ಶಕ್ತಿಯಾಗಿದ್ದಾರೆ. ಅವರು ದೇಶದ ಆಸ್ತಿ. ಹೆಣ್ಮಕ್ಕಳಿಗೆ ಸಮಾಜದಲ್ಲಿ ಮೊದಲ ಸ್ಥಾನವಿದೆ. ಕರಾವಳಿಯ ಸಹಕಾರಿ ವ್ಯವಸ್ಥೆ ಬಲಿಷ್ಟವಾಗಿದೆ. ಸಾಲ ಮರು ಪಾವತಿಯಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರಿ ತತ್ವದ ಈ ಪರಂಪರೆ ಮುಂದುವರಿಯಲಿ ಎಂದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ, ಸಂಸ್ಕೃತಿ, ಶಾಂತಿಯ ವಾತಾವರಣ
ಉಳಿಯಬೇಕೆಂದು ಆಶಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆ, ಪೂಜಿಸುತ್ತಾರೆ, ಆ ಜಾಗ ಅಭಿವೃದ್ಧಿ ಕಾಣುತ್ತದೆ.ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ.
ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ. ನಮ್ಮ ಸಮಾಜದಲ್ಲಿ ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ, ನೂರು ರೂಪಾಯಿ ಕೊಟ್ಟರೂ ಅಷ್ಟೆ, ಒಂದು ಲಕ್ಷ ರೂಪಾಯಿ ಕೊಟ್ಟರೂ ಅಷ್ಟೇ, ಸಂಸಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಗಡೆ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಸಭಾಧ್ಯಕ್ಷರಾದ ಯು.ಟಿ.ಖಾದರ್, ಸಚಿವರಾದ ದಿನೇಶ್ ಗುಂಡೂರಾವ್, ಆರ್.ಬಿ.ತಿಮ್ಮಾಪುರ, ಕೆ.ಎನ್.ರಾಜಣ್ಣ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.