
ಏಪ್ರಿಲ 22 ರಂದು ಪಹಲ್ಗಾಮ್ ದಾಳಿ ಆಗಿದ್ದಾಗ ಗಟ್ಟಿ ಧ್ವನಿಯಲ್ಲಿ ದಾಳಿಯನ್ನು ಖಂಡಿಸಿದ್ದ ಸುದೀಪ್, ಆ ಬಳಿಕ ಭಾರತ ಸೇನೆ ಮಾಡಿದ್ದ ಆಪರೇಷನ್ ಸಿಂಧೂರ್ ಅನ್ನು ಕೊಂಡಾಡಿದ್ದರು. ನಾವು ಸೈನ್ಯದ ಪರ ಇರುವುದಾಗಿ ಹೇಳಿದ್ದರು. ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣ ಆಗಿರುವ ಸಮಯದಲ್ಲಿ ನಟ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ನನ್ನ ತಾಯಿ ಸರೋಜಾ ಸಂಜೀವ್ ಅವರು ನಿಧನರಾದಾಗ ನೀವು ಬರೆದ ಪತ್ರ, ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಅದು ನನಗೆ ಜೀವನ ಪರ್ಯಂತ ನೆನಪು ಉಳಿಯಲಿವೆ. ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ ಬದಲಿಗೆ ದೇಶದ ನಾಗರೀಕನಾಗಿ ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನ ಭಾರತ ನೀಡಿದ್ದು, ಆಪರೇಷನ್ ಸಿಂಧೂರ್‌ನ ವಿಜಯೋತ್ಸವಕ್ಕೆ ರಾಷ್ಟ್ರವೇ ನಮಿಸಿದೆ. ನಾನು ನಿಮಗೆ ಆಳವಾದ ಅಭಿಮಾನದಿಂದ ಬರೆಯುತ್ತೇನೆ. ಆಪರೇಷನ್ ಸಿಂಧೂರ್ ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ, ಅದೊಂದು ಹೇಳಿಕೆಯಾಗಿತ್ತು. ಭಾರತವು ಅಲುಗಾಡುವುದಿಲ್ಲ, ಭಾರತವು ಮರೆಯುವುದಿಲ್ಲ ಮತ್ತು ಭಾರತವು ಯಾವಾಗಲೂ ಉದಯಿಸುತ್ತದೆ ಎಂಬ ದಿಟ್ಟ, ನಿರ್ಣಾಯಕ ಸಂದೇಶವನ್ನು ಜಗತ್ತಿಗೆ ನೀಡಿದೆ ಎಂದು ಸುದೀಪ್ ಅವರು ಹೇಳಿದ್ದಾರೆ. ಸುದೀಪ್ ಬರೆದ ಪತ್ರದಲ್ಲೇನಿದೆ? ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ, ನಮಸ್ಕಾರ ಮೊದಲಿಗೆ, ನನ್ನ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ನೀವು ಕಳುಹಿಸಿದ ಪತ್ರ, ವೈಯಕ್ತಿಕ ನಷ್ಟದ ಆ ಕಠಿಣ ಸಮಯದಲ್ಲಿ ನನಗೆ ಶಕ್ತಿ, ಧೈರ್ಯವನ್ನು ತುಂಬಿತ್ತು. ಜೀವನಪರ್ಯಂತ ನಾನು ಅದನ್ನು ಮರೆಯಲಾರೆ. ಇಂದು ನಾನು ಈ ಪತ್ರವನ್ನು ಕೇವಲ ಒಬ್ಬ ಮಗನಾಗಿ ಬರೆಯುತ್ತಿಲ್ಲ ಬದಲಿಗೆ ಈ ದೇಶದ ಹೆಮ್ಮೆಯ ನಾಗರೀಕನಾಗಿ ಬರೆಯುತ್ತಿದ್ದೇನೆ, ಇಡೀ ದೇಶ ನಿಮಗೆ ಆಪರೇಷನ್ ಸಿಂದೂರದ ಯಶಸ್ಸಿಗೆ ಅಭಿನಂದನೆಗಳನ್ನು ಹೇಳುತ್ತಿದೆ. ಆ ಪೈಕಿ ನಾನು ಕೂಡ ನಿಮ್ಮ ಈ ಕಾರ್ಯವನ್ನು ಮೆಚ್ಚಿಕೊಂಡಿದ್ದು ಇದು ಕೇವಲ ಪ್ರತಿಕ್ರಿಯೆಯಾಗಿರಲಿಲ್ಲ ಬದಲಿಗೆ ಇದೊಂದು ಹೇಳಿಕೆಯಾಗಿತ್ತು ಎಂದು ಭಾವಿಸುತ್ತೇನೆ.