
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಅಶ್ಲೀಲ ಪದ ಬಳಕೆ ಪ್ರಕರಣವನ್ನು ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಿದ್ದು ಅದರ ವರದಿ ಬಂದಮೇಲೆ ನಿರ್ಣಯ ಪ್ರಕಟಿಸಲಾಗುವುದೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಬಾಗಲಕೋಟೆಯಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು. ಸಿಟಿ ರವಿ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ಅಶ್ಲೀಲ ಪದ ಬಳಕೆಗೆ ಸಂಬಂಧಿಸಿದಂತೆ ಸದನದಲ್ಲಿ ನಮಗೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಖಾಸಗಿ ಚಾನೆಲ್ ನಲ್ಲಿ ಇದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದು,ಅವರು ಅದರ ವಿಡಿಯೋ ಕಳಿಸಿದ್ದಾರೆ. ಅದನ್ನು ನಾವು ಎಫ್ ಎಸ್ ಎಲ್ ಗೆ ಕಳಿಸಲು ತಿಳಿಸಿದ್ದೇವೆ. ಎಫ್ ಎಸ್ ಎಲ್ ಅವರಿಂದ ರಿಪೋರ್ಟ್ ಬಂದ ಮೇಲೆ ಅದನ್ನು ಪರಿಗಣಿಸಲಾಗುವುದು. ಎಲ್ಲವನ್ನು ನೀತಿ ನಿರೂಪಣಾ ಕಮಿಟಿಗೆ ಕಳಿಸಲಾಗುವುದು ಅವರು ವರದಿ ನೀಡಿದ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಪ್ರಕರಣ ನನ್ನ ಬಳಿಗೆ ಬಂದಾಗ ನಾನು ಇಬ್ಬರನ್ನು ಕರೆದು ಮಾತನಾಡಿ ನನ್ನದೇ ಆದಂತಹ ನಿರ್ಣಯವನ್ನು ಕೊಟ್ಟಿದ್ದೇನೆ. ಅಧಿಕೃತವಾಗಿ ಸದನದಲ್ಲಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಸದನದಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಸದನ ಆರಂಭವಾದ ಮೇಲೆ ಆರಂಭವಾಗುತ್ತವೆ ಮುಗಿದ ಮೇಲೆ ಸ್ಥಗಿತಗೊಳ್ಳುತ್ತವೆ.
ನಂತರ ಸಿಟಿ ರವಿ ಹಾಗೂ ಹೆಬ್ಬಾಳ್ಕರ್ ಇಬ್ಬರು ದೂರು ದಾಖಲಿಸಿದರು. ಅದನ್ನು ನಾವು ನೀತಿ ನಿರೂಪಣಾ ಸಮಿತಿಗೆ ಒಪ್ಪಿಸಿದೆವು. ರವಿ ಕೋರ್ಟಿಗೆ ಹೋಗಿದ್ದರು ಅಲ್ಲಿಯೂ ಸಹ ತಿರಸ್ಕಾರ ಆಗಿದೆ.ಈ ಮೊದಲು ನೀತಿ ನಿರೂಪಣ ಸಮಿತಿಯಲ್ಲಿ ಸಿಟಿ ರವಿ ಅವರು ಇದ್ದರು ಈಗ ಅವರದೇ ಪ್ರಕರಣ ಇರುವುದರಿಂದ ಅವರನ್ನು ತೆಗೆದುಹಾಕಿ ಬಾಗಲಕೋಟೆ ಪಿ ಎಚ್ ಪೂಜಾರ್ ಅವರನ್ನು ಸಮಿತಿಗೆ ಸೇರಿಸಲಾಗಿದೆ. ನೀತಿ ನಿರೂಪಣ ಸಮಿತಿಯ ವರದಿ ಬಂದಮೇಲೆ ತೀರ್ಮಾನ ತಿಳಿಸಲಾಗುವುದು. ಹೀಗಿದ್ದರೂ ಇಬ್ಬರನ್ನು ಕರೆದು ತಿಳುವಳಿಕೆ ನೀಡಿ ಪ್ರಕರಣ ಬಗೆಹರಿಸುವ ಕಾರ್ಯ ಮಾಡಲಾಗುವುದೆಂದು ಹೊರಟ್ಟಿ ತಿಳಿಸಿದರು.