
ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಮಂಜೂರಾದ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಯನ್ನು ಚಿಕ್ಕೋಡಿಯ ಬದಲೂ ಬೆಳಗಾವಿಯಲ್ಲೇ ನಿರ್ಮಿಸುವ ಕುರಿತು ಇಂದು ಬೆಳಗಾವಿಯ ಕೆಡಿಪಿ ಸಭೆಯಲ್ಲಿ ಮಹತ್ವದ ಚರ್ಚೆಯಾಯಿತು. ಸೂಕ್ತ ಸ್ಥಳಾವನ್ನು ಗುರುತಿಸಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶವನ್ನು ಕೇಳಿದರು.
ಇಂದು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ ಅವರು ವಿಕಲಚೇತರ ಇಲಾಖೆಯಿಂದ ಮಂಜೂರಾಗುವ ವೀಲ್’ಚೇರಗಳ ವಿತರಣೆಯಲ್ಲಿ ಉಂಟಾಗುವ ವಿಳಂಬದ ಕುರಿತು ಚರ್ಚಿಸಿದರು. ಅಲ್ಲದೇ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಮಷೀನ್ ಸ್ಥಳಾಂತರಿಸಲು ನೀಡಿದ ಆದೇಶ ಪಾಲನೆಯ ಕುರಿತು ಕೇಳಿದಾಗ ಈಗಾಗಲೇ ಸಿಟಿ ಸ್ಕ್ಯಾನ್ ಮಷೀನ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಡಿ.ಎಚ್.ಓ ಅಶೋಕ ಶೆಟ್ಟಿ ತಿಳಿಸಿದರು.
ಅದೇ ರೀತಿ ಬೆಳಗಾವಿ ಜಿಲ್ಲೆಗೆ ಮಂಜೂರಾದ ಕ್ಯಾನ್ಸರ್ ಆಸ್ಪತ್ರೆಯನ್ನು ಚಿಕ್ಕೋಡಿಯಲ್ಲಿ ನಿರ್ಮಿಸದೇ ಬೆಳಗಾವಿಯಲ್ಲಿಯೇ ನಿರ್ಮಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು. ವಿಧಾನಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಅವರು ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಕೇಳಿದಾಗ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶವನ್ನು ಕೇಳಿದರು.
ಇನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಪಾಲನಾ, ಅರಣ್ಯ, ರೇಷ್ಮೇ ಮೀನುಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಯ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಶಾಸಕರಾದ ಆಸೀಫ್ ಸೇಠ್, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಇನ್ನುಳಿದ ಜಿ.ಪಂ. ಸಿಇಓ ರಾಹುಲ್ ಶಿಂಧೆ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.