ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3.6KG ಬಂಗಾರ ಕಳ್ಳತನ

ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ಕೆಜಿಗಟ್ಟಲೇ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರ ಕಂಬಿ ಎಣಿಸುತ್ತಿದ್ದಾನೆ. ಬ್ಯಾಂಕಿನ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡ್ತಿದ್ದ ಆರೋಪಿ, ಚಿನ್ನ ಕದ್ದು ಬೇರೆ ಬ್ಯಾಂಕ್ನಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡಿದ್ದಾನೆ. ಬ್ಯಾಂಕ್ ಅಲ್ಲಿ ವಾರ್ಷಿಕ ಲೆಕ್ಕಚಾರ ಮಾಡುವ ವೇಳೆ ಚಿನ್ನ ಕಮ್ಮಿ ಬಂದಿರುವುದು ಗೊತ್ತಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ದಾವಣಗೆರೆ ಪೊಲೀಸರು ಆರೋಪಿ ಬ್ಯಾಂಕ್ ನೌಕರ ಸಂಜಯ್ ಟಿ.ಪಿ ಅವರನ್ನು ಬಂಧಿಸಿದ್ದಾರೆ.
2.61 ಕೋಟಿ ಮೌಲ್ಯದ ಬಂಗಾರದ ಆಭರಣಗಳು ವಶ: ಸಿ.ಎಸ್.ಬಿ. ಬ್ಯಾಂಕ್ನ ವ್ಯವಸ್ಥಾಪಕರಾದ ಶಿವಕುಮಾರ್.ಕೆ.ಬಿ ಅವರು ತಮ್ಮ ಬ್ಯಾಂಕಿನ ಗೋಲ್ಡ್ ಲೋನ್ ಆಫೀಸರ್ ಸಂಜಯ್ ಟಿ.ಪಿ. ಬ್ಯಾಂಕಿನ ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಪ್ರಕರಣದ ಬಗ್ಗೆ ಎಸ್ಪಿ ಪ್ರತಿಕ್ರಿಯೆ: ಆರೋಪಿ ಸಂಜಯ್.ಟಿ.ಪಿ. ಇವನನ್ನು ಪತ್ತೆ ಮಾಡಿ ನಮ್ಮ ಗ್ರಾಹಕರ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ ಕೊಡಿ ಅಂತ ದೂರು ನೀಡಿದ ಹಿನ್ನೆಲೆಯಲ್ಲಿ ಕೆ.ಟಿ.ಜೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿ ಸಂಜಯ್ ಟಿ.ಪಿ (35)ಯನ್ನು ಬಂಧಿದ್ದಾರೆ. ಬಂಧಿತನಿಂದ 2 ಕೋಟಿ 61 ಲಕ್ಷದ 4 ಸಾವಿರ ರೂ ಬೆಲೆ ಬಾಳುವ 3 ಕೆಜಿ 643 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದೇವೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.