
ಬೆಂಗಳೂರು: ಕಳ್ಳತನ ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಪೊಲೀಸರು ವ್ಯಕ್ತಿಯನ್ನು ಅಕ್ರಮವಾಗಿ ಒಂದು ದಿನದ ಕಾಲ ಠಾಣೆಯಲ್ಲಿ ಇರಿಸಿಕೊಂಡ ಆರೋಪ ಪ್ರಕರಣದ ತನಿಖೆ ನಡೆಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗವು ನೊಂದ ವ್ಯಕ್ತಿಯ ಕುಟುಂಬಕ್ಕೆ ಒಂದು ತಿಂಗಳೊಳಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಾನವ ಹಕ್ಕು ಉಲ್ಲಂಘಿಸಿರುವ ಭಾರತಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ವಿರುದ್ಧ ಇಲಾಖಾ ವಿಚಾರಣೆ ಬಳಿಕ ತೀರ್ಪಿಗೆ ಒಳಪಟ್ಟು, ಸರ್ಕಾರ ನೀಡಿದ ಪರಿಹಾರ ಹಣವನ್ನು ಇನ್ಸ್ಪೆಕ್ಟರ್ ವೇತನದಿಂದಲೇ ವಸೂಲಿ ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸಬೇಕು ಎಂದು ಆಯೋಗವು ತಿಳಿಸಿದೆ.
ಪ್ರಕರಣದ ವಿವರ: ತನ್ನ ಗಂಡ ನಯೀಮ್ ಪಾಷಾನನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ಬಿಡುಗಡೆಗಾಗಿ 50 ಸಾವಿರ ರೂ. ಬೇಡಿಕೆ ಇಟ್ಟಿರುವುವುದಾಗಿ ಆರೋಪಿಸಿ ಭಾರತಿನಗರ ಠಾಣೆ ಇನ್ಸ್ಪೆೆಕ್ಟರ್ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಮುಬೀನ್ ತಾಜ್ ಎಂಬ ಮಹಿಳೆ ದೂರು ನೀಡಿದ್ದರು. ಈ ಬಗ್ಗೆ ಆಯೋಗದ ಡಿವೈಎಸ್ಪಿ ಮೋಹನ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಳ್ಳತನ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಸೈಯ್ಯದ್ ಆಸೀಫ್ ಎಂಬಾತನ ವಿಚಾರಣೆ ನಡೆಸಿದಾಗ ಕದ್ದ ಮೊಬೈಲ್ಗಳನ್ನು ನಯೀಮ್ ಪಾಷಾಗೆ ನೀಡಿರುವುದಾಗಿ ಬಾಯ್ಬಿಟ್ಟಿದ್ದ. ಆತನ ಮಾಹಿತಿ ಆಧರಿಸಿ ಪೊಲೀಸರು ನಯೀಮ್ ಪಾಷಾಗೆ ನೋಟಿಸ್ ನೀಡಿ, ಕಳೆದ ಮಾರ್ಚ್ 28ರಂದು ಕರೆಯಿಸಿ ವಿಚಾರಣೆ ನಡೆಸಿದಾಗ ಆರೋಪಿಯಿಂದ ಪಡೆದುಕೊಂಡಿದ್ದ ಐದು ಮೊಬೈಲ್ಗಳನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದ. ಅಲ್ಲದೆ, ಕಳುವಾಗಿದ್ದ ಆಟೋವನ್ನು ತೋರಿಸುವುದಾಗಿ ನಯೀಮ್ ಹೇಳಿಕೆ ನೀಡಿದ್ದ. ಈತ ಸೂಚಿಸಿದ ಸ್ಥಳಕ್ಕೆ ನಯೀಮ್ನನ್ನು ಪೊಲೀಸರು ಕರೆದುಕೊಂಡು ಹೋದರೂ ಆಟೋ ಪತ್ತೆಯಾಗದ ಹಿನ್ನೆಲೆಯಲ್ಲಿ ಠಾಣೆಗೆ ವಾಪಸ್ ಕರೆತಂದಿದ್ದರು ಎಂದು ಆಯೋಗ ವಿವರಿಸಿದೆ.