ಸುರಿಯುವ ಮಳೆ ಲೆಕ್ಕಿಸದೇ ದೇಶಪ್ರೇಮ ಮೆರೆದ ವಿಜಯಪುರ ದೇಶಭಕ್ತರು: ಭಾರತೀಯ ಯೋಧರಿಗೆ ಸ್ಥೈರ್ಯ ತುಂಬಲು ತಿರಂಗಾ ಯಾತ್ರೆ

ವಿಜಯಪುರ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಬಿಜೆಪಿ ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ನಿವೃತ್ತ ಯೋಧರು, ವಕೀಲರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾರ್ಯಕರ್ತರುಗಳ ನೇತೃತ್ವದಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಾರಿ ಮಳೆ ಸುರಿಯಿತು.ಸುರಿಯುವ ಮಳೆ ಲೆಕ್ಕಿಸದೆ ತ್ರಿವರ್ಣ ಧ್ವಜವನ್ನು ಹಿಡಿದು ಭಾರತ ಮಾತೆಗೆ ಜಯವಾಗಲಿ, ವಂದೇ ಮಾತರಂ, ಭಾರತೀಯ ಸೈನ್ಯಕ್ಕೆ ಜೈಕಾರ ಕೂಗಿದರು. ಪೆಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಉಗ್ರ ರಕ್ಕಸರ ವಿರುದ್ಧದ ಬೃಹತ್ ಕಾರ್ಯಾಚರಣೆ ಆಪರೇಷನ್ ಸಿಂಧೂರದ ಮೂಲಕ ಉಗ್ರರನ್ನು ಸದೆಬಡಿದಿರುವ ವೀರ ಯೋಧರಿಗೆ ನೈತಿಕ ಸ್ಥೈರ್ಯ ಹಾಗೂ ಬೆಂಬಲ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಲ್ಲದೇ ಪ್ರಧಾನಿ ಮೋದಿಯವರು ಯುದ್ಧ ಆರಂಭವಾಗುವ ಮುನ್ನವೇ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವ ಹಿನ್ನೆಲೆಯಲ್ಲಿ ಮುಂದಿನ ಎಲ್ಲಾ ಕಾರ್ಯಾಚರಣೆಗೂ ಬೆಂಬಲ ನೀಡಲಿದ್ದಾರೆ ಎಂದು ನೆರೆದ ಗಣ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾನ್ಯ ಸಂಸದರಾದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ಸಂದೀಪ ಪಾಟೀಲ, ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ಮಹೇಶ ಒಡೆಯರ್, ರಾಹುಲ್ ಜಾಧವ ಸೇರಿದಂತೆ ಪೂಜ್ಯರು ,ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.