ಅಂತರ್‌ರಾಜ್ಯ ಡಕಾಯಿತಿನ ಮೇಲೆ ಪೊಲೀಸರು ಫೈರ್

ಬಳ್ಳಾರಿ: ಅಂತರ್‌ರಾಜ್ಯ ಡಕಾಯಿತಿನ ಮೇಲೆ ಪೊಲೀಸರು ಫೈರ್ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಇಂದು ನಡೆಯಿತು.
ಕರ್ನಾಟಕ, ತೆಲಂಗಾಣ, ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕಳ್ಳತನ ಮತ್ತು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಅಂಬ್ರೇಶ್ ಎಂಬಾತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಪ್ರತಿಕ್ರಿಯಿಸಿದ್ದು, “ಡಕಾಯಿತಿಗೆ ಸಂಬಂಧಿಸಿದಂತೆ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡಾಗ ಏಳು ಜನ ಭಾಗಿಯಾಗಿದ್ದು ತಿಳಿದುಬಂತು. ಪ್ರಮುಖ ಆರೋಪಿ ಅಂಬ್ರೇಶ್‌ನನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗಿತ್ತು. ನಂತರ ತನಿಖಾ ತಂಡ ರಚಿಸಿ, ನಿನ್ನೆ ಆರೋಪಿಯನ್ನು ವಶಕ್ಕೆ ಪಡೆದು ಮಹಜರಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ವಿರುಪಾಕ್ಷಪ್ಪ ಹಾಗೂ ಮಾರುತಿ ಮೇಲೆ ಮತ್ತೆ ಹಲ್ಲೆ ಮಾಡಿ ಎಸ್ಕೇಪ್ ಆಗುವ ಪ್ರಯತ್ನ ಮಾಡಿದ್ದಾನೆ. ಆಗ ಸಿಪಿಐ ವೈ.ಎಸ್.ಹನುಮಂತಪ್ಪ ಏರ್ ಫೈರ್ ಮಾಡಿ ಎಚ್ಚರಿಸಿದ್ದಾರೆ. ಆಗ ಆತ ಮತ್ತೆ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ” ಎಂದು ತಿಳಿಸಿದರು.ಗಾಯಗೊಂಡ ಆರೋಪಿಯನ್ನು ಬಂಧಿಸಿ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರುಗುಪ್ಪ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ವಿರುಪಾಕ್ಷಪ್ಪ ಗೌಡ ಮತ್ತು ಮಾರುತಿ ಅವರಿಗೆ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.