ಧಾರವಾಡ

ಅಂಗಾಂಗ ದಾನದಲ್ಲಿ ಧಾರವಾಡ ಜಿಲ್ಲೆಗೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!

ಧಾರವಾಡ, ಮೇ 16: ಅಪಘಾತ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಮನುಷ್ಯನ ಮೆದುಳು ಕೆಲವೊಮ್ಮೆ ನಿಷ್ಕ್ರಿಯಗೊಂಡು ಬಿಡುತ್ತದೆ. ಆಗ ಆ ವ್ಯಕ್ತಿ ಸಹಜವಾಗಿ ಕೋಮಾ ಸ್ಥಿತಿಗೆ ಹೋಗುತ್ತಾನೆ. ಅಂಥ ವ್ಯಕ್ತಿ ಜೀವಂತವಾಗಿದ್ದರೂ ಇಲ್ಲದಂತಾಗಿರುತ್ತಾನೆ. ಮತ್ತೆ ಆತನಿಗೆ ಪ್ರಜ್ಞೆ ಬರುವ ಸಾಧ್ಯತೆಯೇ ಇಲ್ಲ ಎಂಬಂಥ ಸ್ಥಿತಿಯಲ್ಲಿ ವೈದ್ಯಕೀಯ ಪರಿಭಾಷೆಯಲ್ಲಿ ‘‘ಬ್ರೈನ್​ ಡೆಡ್’’ ಎಂದು ಘೋಷಿಸಲಾಗುತ್ತದೆ. ಆದರೆ, ಇಂಥ ಸಂದರ್ಭದಲ್ಲಿ ಆ ವ್ಯಕ್ತಿಯ ಇತರೆ ಅಂಗಾಂಗಗಳು ಐದಾರು ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿರುತ್ತವೆ. ಆ ರೀತಿ ಮೆದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಯ ಅಂಗಾಂಗ ಮತ್ತು ಅಂಗಾಂಶಗಳನ್ನು ದಾನ  ಮಾಡುವ ಪ್ರಕ್ರಿಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವೆಬ್‌ಸೈಟ್‌ನ್ನೂ ತೆರೆದಿರುವುದು ವಿಶೇಷ. ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶಗಳ ದಾನ ನೀಡಲು ಮಾಡಿರುವ ವೆಬ್‌ಸೈಟ್ ಇದು. ಇದರಲ್ಲಿ ಯಾರಾದರೂ ಕೂಡ ತಮ್ಮ ಹೆಸರನ್ನು ನೋಂದಣಿ ಮಾಡಬಹುದಾಗಿದೆ. ಇಂಥದ್ದೊಂದು ಅಭಿಯಾನದಲ್ಲಿ ಧಾರವಾಡ  ಜಿಲ್ಲೆಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ವೆಬ್​ಸೈಟ್ ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವವರು, ‘‘ಒಂದು ವೇಳೆ ಮೆದುಳು ನಿಷ್ಕ್ರಿಯಗೊಂಡರೆ ನಾನು ನನ್ನ ಅಂಗಾಂಗ ಹಾಗೂ ಅಂಗಾಂಶಗಳನ್ನು ದಾನ ಮಾಡಲು ಸಿದ್ಧನಿದ್ದೇನೆ’’ ಎಂದು ವಾಗ್ದಾನ ಮಾಡಬೇಕಾಗುತ್ತದೆ. ಒಂದು ವೇಳೆ ಹಾಗೇನಾದರೂ ಮೆದುಳು ನಿಷ್ಕ್ರಿಯಗೊಂಡರೆ ಆ ವ್ಯಕ್ತಿಯ ವಿವಿಧ ಅಂಗಾಂಶ ಹಾಗೂ ಅಂಗಾಂಗಳನ್ನು ಅಗತ್ಯವಿರುವ ವ್ಯಕ್ತಿಗೆ ನೀಡಿ ಕಸಿ ಮಾಡಿ ಆತನನ್ನು ಬದುಕಿಸಬಹುದಾಗಿದೆ.

ಧಾರವಾಡದಲ್ಲಿ 8,177 ಮಂದಿಯಿಂದ ಅಂಗಾಂಗ ದಾನಕ್ಕೆ ನೋಂದಣಿ

ಏಪ್ರಿಲ್ ತಿಂಗಳ ಅಂತ್ಯದವರೆಗೆ ಕರ್ನಾಟಕದಲ್ಲಿ 35,868 ಜನರು ಅಂಗಾಂಗ ದಾನಕ್ಕೆ ಒಪ್ಪಿ, ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 8,177 ಜನರು ಅಂಗಾಂಗ ಹಾಗೂ ಅಂಗಾಂಶಗಳ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಧಾರವಾಡ ಜಿಲ್ಲೆ ದೇಶದಲ್ಲೇ ಎರಡನೆಯ ಜಿಲ್ಲೆಯಾಗಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಎಂ. ಹೊನಕೇರಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button