
ಅರಣ್ಯದೊಳಗಿಂದ ಅರಣ್ಯದ ಹೊರಕ್ಕೆ ವಸತಿ ಪ್ರದೇಶಗಳನ್ನು ಸ್ಥಳಾಂತರ ಮಾಡುವುದರಿಂದ ಅರಣ್ಯ ಮತ್ತು ಅರಣ್ಯ ಸಂಪತ್ತು ವೃದ್ಧಿಸುತ್ತದೆ. ಅರಣ್ಯವಾಸಿಗಳ ಬದುಕು ಕೂಡ ಹಸನಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರು ಇಂದು ಖಾನಾಪೂರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಳೆದ ಡಿಸೆಂಬರ್ ತಿಂಗಳಲ್ಲಿ ವಿಧಾನಮಂಡಳದ ಅಧಿವೇಶನ ವೇಳೆ ಭೀಮಗಢಕ್ಕೆ ಭೇಟಿ ನೀಡಿದ್ದಾಗ, ಅರಣ್ಯದೊಳಗೆ ತಲೆಯ ಮೇಲೆ ದಿನಸಿ ಹೊತ್ತು ಬರುತ್ತಿದ್ದ ಮಹಿಳೆಯರನ್ನು ನೋಡಿ, ಕಾರು ನಿಲ್ಲಿಸಿ ಮಾತನಾಡಿಸಿದಾಗ, ಒಬ್ಬರು ತಮ್ಮ ಪತಿಯನ್ನು ಹುಲಿ ಕೊಂದು ಹಾಕಿತು ಎಂದು ದುಃಖ ತೋಡಿಕೊಂಡರೆ, ಮತ್ತೊಬ್ಬ ಮಹಿಳೆ ತಮ್ಮ ಪತಿಯ ಮೇಲೆ ಕರಡಿ ದಾಳಿ ಮಾಡಿ ಶಾಶ್ವತ ಅಂಗವೈಕಲ್ಯ ಉಂಟಾಗಿದೆ ಎಂದರು. ಈ ಘಟನೆ ತಮ್ಮ ಮನ ಕಲಕಿತು ಎಂದರು.
ತಳೇವಾಡಿಗೆ ಭೇಟಿ ನೀಡಿದಾಗ ಅಲ್ಲಿನ ಕುಟುಂಬದ ಸದಸ್ಯರು ಸ್ವಯಂ ಇಚ್ಛೆಯಿಂದ ಕಾಡಿನಿಂದ ಹೊರಗೆ ಹೋಗಲು ತಾವು ಸಿದ್ಧವಿರುವುದಾಗಿ ತಿಳಿಸಿದರು. ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಇದು ಅದು ಸಾಕಾರವಾಗಿದೆ ಎಂದರು. ಪ್ರಥಮ ಹಂತದಲ್ಲಿ ಇಂದು 27 ಕುಟುಂಬಗಳಿಗೆ ನಿಯಮಾನುಸಾರ ಮತ್ತು ಕಾನೂನು ಬದ್ಧವಾಗಿ ಪ್ರಥಮ ಹಂತದಲ್ಲಿ ಒಂದು ಪರಿವಾರದ ಘಟಕಕ್ಕೆ ತಲಾ 10 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಉಳಿದ 5 ಲಕ್ಷ ರೂಪಾಯಿಗಳನ್ನು ಅವರು ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಿದ ತರುವಾಯ ನೀಡಲಾಗುವುದು ಎಂದರು. ಒತ್ತಾಯಪೂರ್ವಕವಾಗಿ ಅರಣ್ಯದಿಂದ ಅರಣ್ಯವಾಸಿಗಳನ್ನು ಹೊರಗೆ ಕಳಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸ್ವಯಂ ಇಚ್ಛೆಯಿಂದ ತಾವೇ ಮುಂದೆ ಬಂದ ಅರಣ್ಯವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ ಎಂದರು.