
ಪುಣೆ: ನವೆಂಬರ್ 20 ರಂದು ನಡೆಯುವ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆಯಲ್ಲಿ ಮರಾಠವಾಡ, ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭ ಭಾಗದ ಸುಮಾರು 12 ಲಕ್ಷ ಮಂದಿ ಕಬ್ಬು ಕಟಾವು ಕಾರ್ಮಿಕರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇದೆ.
ನವೆಂಬರ್ 15 ರಿಂದ ಕಬ್ಬು ಕಟಾವು ಋತು ಆರಂಭವಾಗಲಿದ್ದು, ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಕಬ್ಬು ಕಟಾವು ಮಾಡುವ ಕಾರ್ಮಿಕರು ಪಶ್ಚಿಮ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ಮಹಾರಾಷ್ಟ್ರ ಕಬ್ಬು ಕಟಾವುಗಾರರ ಹಾಗೂ ಸಾಗಣೆದಾರರ ಅಸೋಶಿಯೇಷನ್ ಹೇಳಿದೆ.
ಕಬ್ಬು ಕಟಾವು ಕಾರ್ಮಿಕರು ಮತದಾನ ಮಾಡುವ ತಮ್ಮ ಹಕ್ಕಿನಿಂದ ವಂಚಿತರಾಗದಂತೆ, ಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಅಸೋಶಿಯೇಷನ್ ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠಕ್ಕೆ ಮನವಿ ಮಾಡಿದೆ.
ಆದರೆ ಕಾರ್ಮಿಕರು ತಮ್ಮ ಹಕ್ಕು ಚಲಾಯಿಸಲು ಅವರ ಸ್ಥಳಕ್ಕೆ ಮರಳಿ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಪಶ್ಚಿಮ ಭಾರತ ಕಬ್ಬು ಮಿಲ್ ಅಸೋಶಿಯೇಷನ್ ತಿಳಿಸಿದೆ.