
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಮಹತ್ವದ ಹಾಗೂ ಗೌಪ್ಯವಾದ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ. ದಿಢೀರನೆ ಇಂದು ಶಿವಣ್ಣನ ನಿವಾಸದಲ್ಲಿ ನಡೆದ ಈ ಮೀಟಿಂಗ್‌ನಲ್ಲಿ ಸ್ಯಾಂಡಲ್‌ವುಡ್ ಸೇರಿದಂತೆ ಹಲವು ಗಂಭೀರ ವಿಚಾರಗಳ ಬಗ್ಗೆ ಚರ್ಚೆಯೂ ನಡೆದಿದೆಯಂತೆ.
ಈ ಸಭೆಯಲ್ಲಿ ನಟರಾದ ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಧ್ರುವ ಸರ್ಜಾ ಸೇರಿದಂತೆ ಹಲವು ನಟರು, ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ವಿತರಕರು ಕೂಡ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಸಭೆಯಲ್ಲಿ ಸೇರಿದ ಎಲ್ಲರೂ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಈಗ ಎದುರಾಗಿರುವ ಗಂಭೀರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ತಮ್ಮ ತಮ್ಮ ವಿಭಾಗಗಳಲ್ಲಿ ಇರುವ ಸಮಸ್ಯೆಗಳನ್ನು ಕೂಡ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಕನ್ನಡದ ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ಒಂದು ಅಥವಾ ಎರಡು ರಿಲೀಸ್ ಆಗ್ತಿತ್ತು. ಇದರಿಂದ ಥಿಯೇಟರ್‌ಗಳಿಗೂ ಜನ ತಕ್ಕಮಟ್ಟಿಗೆ ಬರುತ್ತಿದ್ದರು. ಈಗ ಬೇರೆ ಚಿತ್ರರಂಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ಇರುವುದೇ ಬೆರಳೆಣಿಕಯಷ್ಟು ಸ್ಟಾರ್ ನಟರು, ಅವರು ಕೂಡ ಎರಡ್ಮೂರು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರರಂಗ ಉಳಿಯುವುದು ಹೇಗೆ? ಎಂದು ಹಲವರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಭೆಯು ದೊಡ್ಮನೆಯ ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಕನ್ನಡ ಚಿತ್ರರಂಗ ಎದುರಿಸ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ, ಇತ್ತೀಚೆಗೆ ಥಿಯೇಟರ್‌ಗಳಿಗೆ ಜನ ಬರುತ್ತಿಲ್ಲ, ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳೂ ಸಿಗುತ್ತಿಲ್ಲ, ಟಿಕೆಟ್ ದರ, ಕನ್ನಡ ಸಿನಿಮಾಗಳು ಕಡಿಮೆಯಾಗುತ್ತಿರುವುದು, ಪರಭಾಷಾ ಸಿನಿಮಾಗಳ ಪೈಪೋಟಿ, ನಿರ್ಮಾಪಕರು, ವಿತರಕರು, ಪ್ರದರ್ಶಕರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗಿದೆ. ಮುಖ್ಯವಾಗಿ ಮೊದಲಿನಂತೆ ಈಗ ದೊಡ್ಡ ಸ್ಟಾರ್ ನಟ ಸಿನಿಮಾಗಳು ಕೂಡ ಕಡಿಮೆಯಾಗುತ್ತಿದ್ದು, ವರ್ಷಕ್ಕೆ ಕೆಲವೇ ನಟರ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಬರುತ್ತಿದ್ದು, ಇದರಿಂದ ಸ್ಯಾಂಡಲ್‌ವುಡ್‌ಗೆ ಭಾರಿ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ಹಲವರು ಅಭಿಪ್ರಾಯ ತಿಳಿಸಿದ್ದಾರಂತೆ. ಈ ಸಭೆಯಲ್ಲಿ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕೋರಿ ಶೀಘ್ರದಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ಮುಂದಿನ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.