ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ

ಶಿವಮೊಗ್ಗ: ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ನಡೆದಿದೆ.
ವಾಕಿಂಗ್ ಹೋಗಿದ್ದ ಹೇಮಣ್ಣ ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಮಂಜು ಎಂಬಾತನ ಬಂಧನಕ್ಕೆ ಹೊಳೆ ಹೊನ್ನೂರು ಪೊಲೀಸರು ತೆರಳಿದ್ದರು. ಈ ವೇಳೆ, ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಆತನ ಕಾಲಿಗೆ ಗುಂಡೇಟು ಹೊಡೆದು ಹಿಡಿದಿದ್ದಾರೆ.
ಮೇ 9 ರಂದು ಬೆಳಗ್ಗೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗ್ರಾಮದ ಹೇಮಣ್ಣ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮಂಜು ಪ್ರಮುಖ ಆರೋಪಿ. ಈತನನ್ನು ಬಂಧಿಸಲು ಹೊಳೆಹೊನ್ನೂರು ಪೊಲೀಸ್ ಠಾಣೆಯ ಪಿಐ ಲಕ್ಷ್ಮೀಪತಿ ಹಾಗೂ ಸಿಬ್ಬಂದಿ ತೆರಳಿದ್ದರು. ಈ ವೇಳೆ ಆರೋಪಿ ಮಂಜು ಹೊಳೆಹೊನ್ನೂರು ಪೊಲೀಸ್ ಠಾಣೆಯ ಪ್ರಕಾಶ್ ಎಂಬುವರ ಮೇಲೆ ಹಲ್ಲೆಗೆ ಮುಂದಾಗಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಐ ಲಕ್ಷ್ಮೀಪತಿ ಅವರು ಆರೋಪಿಗೆ ಶರಣಾಗುವಂತೆ ಸೂಚಿಸಿದ್ದರು.ಆದರೂ ಸಹ ಆರೋಪಿ ಪರಾರಿಯಾಗಲು ಯತ್ನಿಸಿದ ಮೇರೆಗೆ ಆರೋಪಿತನ ಬಲಗಾಲಿಗೆ ತಮ್ಮ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸಿ ಸೆರೆ ಹಿಡಿದ್ದಾರೆ. ಆರೋಪಿಯ ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ಪ್ರಕಾಶ್ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆರೋಪಿ ಮಂಜುವನ್ನು ಮೆಗ್ಗಾನ್ ಆಸ್ಪತ್ರೆಯ ಜೈಲ್ ವಾರ್ಡ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.