
ಬೆಳಗಾವಿ, ನ.28 – ಬೆಳಗಾವಿಯ ಉದ್ಯಮಭಾಗ ನಗರ ಪೊಲೀಸ್ ಠಾಣೆಯ ಸಿಪಿಐ ಧರೇಗೌಡ ಪಾಟೀಲ್ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಐದು ಪುಟಗಳ ಕೈ ಬರಹದ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದ ಪೊಲೀಸ್ ಪೇದೆಯನ್ನು ರಕ್ಷಿಸಲಾಗಿದೆ.
ಬೆಳಗಾವಿಯ ಉದ್ಯಮಭಾಗ ಪೊಲೀಸ್ ಠಾಣೆ ಸಿಪಿಐ ಧರೇಗೌಡ ಪಾಟೀಲ್ ವಿರುದ್ಧ ಅದೇ ಠಾಣೆಯ ಪೊಲೀಸ್ ಪೇದೆ ವಿಠ್ಠಲ್ ಮುನ್ಯಾಳ ಹೆಸರಿನಲ್ಲಿ ಸಹಿ ಇರುವ ಐದು ಪುಟಗಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐದು ಪುಟಗಳ ಕೈ ಬರಹದ ಪತ್ರದ ಜೊತೆ ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳನ್ನು ಲಗತ್ತಿಸಲಾದ ಪಿಡಿಎಫ್ ಫೈಲ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜೊತೆಗೆ ಡಿಜಿ-ಐಜಿಪಿ,, ಖಡೇಬಜಾರ್ ಎಸಿಪಿ, ಗೃಹಮಂತ್ರಿ ಡಾ. ಜಿ. ಪರಮೇಶ್ವರ ಕಚೇರಿ, ಮಾನವಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ ಎಸ್‌ಸಿಎಸ್‌ಟಿ ಪ್ರಾಧಿಕಾರ ಘಟಕದ ಹೆಸರಿಗೂ ಪ್ರತಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಪತ್ರದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೇದೆ ವಿಠ್ಠಲ ಮುನ್ಯಾಳರನ್ನು ಪತ್ತೆ ಹಚ್ಚಿ ಮನವೊಲಿಸಿ ಗೌಪ್ಯ ಸ್ಥಳದಲ್ಲಿರಿಸಿ ಕೌನ್ಸಲಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.