ಸಿಡಿಲು ಬಡಿದು ಇಬ್ಬರು ಕುರಿಗಾಯಿ ಸಾವು

ರಾಯಚೂರು/ಹಾವೇರಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಿಡಿಲು ಸಹಿತ ಮಳೆ ಆರ್ಭಟ ಜೋರಾಗಿದೆ. ಬೆಂಗಳೂರಲ್ಲಿ ಮಳೆ ಅವಾಂತರಕ್ಕೆ ಮೂವರು ಸಾವನ್ನಪ್ಪಿದರೆ, ವಿವಿಧ ಜಿಲ್ಲೆಗಳಲ್ಲಿ ಜನರು ಸಿಡಿಲಿಗೆ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಸೋಮವಾರ ರಾಯಚೂರು ಮತ್ತು ಹಾವೇರಿಯಲ್ಲಿ ತಲಾ ಒಬ್ಬ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಸಿಡಿಲು ಬಡಿದು ಇಬ್ಬರು ಕುರಿಗಾಯಿ ಸಾವು: ರಾಯಚೂರಿನ ಭೋಗಿರಾಮನಗುಂಡ(ಬಿ.ಆರ್.ಗುಂಡ)ಯಲ್ಲಿ ಸಿಡಿಲು ಬಡಿದು ಕುರಿಗಾಯಿ ಬಾಲಕ ಸಾವನ್ನಪ್ಪಿದ್ದಾನೆ. ಹನುಮಗೌಡ ನಾಯಕ (16) ಸಿಡಿಲು ಬಡಿದು ಮೃತಪಟ್ಟ ಬಾಲಕ.
ಬಾಲಕ ಗ್ರಾಮದ ಹೊರ ವಲಯದಲ್ಲಿ ಶಂಕರಬಂಡಿ ಹೊಲದಲ್ಲಿ ಕುರಿ ಮೇಯಿಸುತ್ತಿರುವ ಸಂದರ್ಭದಲ್ಲಿ ಮಳೆ, ಗಾಳಿ ಶುರುವಾಗಿದೆ. ತಕ್ಷಣವೇ ಎಲ್ಲಾ ಕುರಿಗಳನ್ನು ಒಂದು ಕಡೆ ಕೂಡಿ ಹಾಕುತ್ತಿರುವ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ತಾಲೂಕು ಹೊಸರಿತ್ತಿಯಲ್ಲಿ ಕೂಡ ಸಿಡಿಲು ಬಡಿದು ಕುರಿಗಾಯಿ ಸಾವನ್ನಪ್ಪಿದ ಘಟನೆ ನಡೆದಿದೆ. 38 ವರ್ಷದ ಹನುಮಂತ ರಾಮನಗೌಡರ ಸಾವನ್ನಪ್ಪಿದ ಕುರಿಗಾಯಿ. ಸೋಮವಾರ ಸಂಜೆ ಕುರಿಗಳಿಗೆ ಮೇವು ತರಲು ಹೋದಾಗ ಸಿಡಿಲು ಬಡಿದು ಹನುಮಂತ ಮೃತಪಟ್ಟಿದ್ದಾರೆ.
ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆಯಿಂದ ಮಳೆರಾಯ ಅಬ್ಬರಿಸಿದ್ದಾನೆ. ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕುಡಿದ ಅಮಲಿನಲ್ಲಿ ಕಾಲುವೆಗೆ ಜಾರಿ ಬಿದ್ದು ಸಾವು: ರಾಯಚೂರಿನ ಬಿ.ಆರ್.ಗುಂಡ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಕಾಲುವೆಗೆ ಜಾರಿ ಬಿದ್ದು ಮೃತಪಟ್ಟಿದ್ದಾನೆ. ತಾಳಿಕೋಟಿ ನಿವಾಸಿ ಸಂತೋಷ (54) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.