
ಬೆಂಗಳೂರು: ತಗ್ಗು ಪ್ರದೇಶದಲ್ಲಿ ಬೇಸ್ಮೆಂಟ್ ನಿರ್ಮಾಣ ಮಾಡಲು ಅವಕಾಶ ನೀಡದಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಕಾವೇರಿ ನಿವಾಸದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಲೋ ಲೈಯಿಂಗ್ ಪ್ರದೇಶದಲ್ಲಿ ಇನ್ನು ಮುಂದೆ ಬೇಸ್ಮೆಂಟ್ ಮಾಡಲು ಅವಕಾಶ ಇರುವುದಿಲ್ಲ. ಅಲ್ಲಿ ಸ್ಟಿಲ್ಟ್ ಫ್ಲೋರ್ ಮಾಡಲು ಅವಕಾಶ ನೀಡಲಾಗುತ್ತದೆ. ಬೇಸ್ ಮೆಂಟ್ಗೆ ನೀರು ನುಗ್ಗುವುದನ್ನು ತಪ್ಪಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಒತ್ತುವರಿಯಾಗಿದ್ದು, ಕೂಡಲೇ ತೆರವಿಗೆ ಸೂಚನೆ ನೀಡಿದ್ದೇನೆ. ಈ ಭಾಗದ ರಸ್ತೆಯಲ್ಲಿ 90 ದಿನದಲ್ಲಿ ಒಳಚರಂಡಿ ನಿರ್ಮಿಸಿ ಕೊಡುವುದಾಗಿ ಮಾನ್ಯತಾ ಟೆಕ್ ಪಾರ್ಕ್ ಸಿಇಒ ಭರವಸೆ ನೀಡಿದ್ದಾರೆ. ಹೆಚ್ಬಿಆರ್ ಬಡಾವಣೆ 5ನೇ ಹಂತದಲ್ಲಿ ರಾಜಕಾಲುವೆ ಸಮಸ್ಯೆ ಇದೆ. ಅಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಆಗುತ್ತಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕಸ ಚರಂಡಿ ಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಸಾಯಿಲೇಔಟ್ ತಗ್ಗು ಪ್ರದೇಶ: ಬಿಡಿಎ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಆದ ಒತ್ತುವರಿಯನ್ನು ತೆರವಿಗೆ ಸೂಚಿಸಿದ್ದೇನೆ. ಸಾಯಿ ಲೇಔಟ್ ತಗ್ಗು ಪ್ರದೇಶದಲ್ಲಿದೆ. ಹಾಗಾಗಿ ಮಳೆ ಹೆಚ್ಚು ಬಂದಾಗ ಸಮಸ್ಯೆ ಆಗುತ್ತಿದೆ. ರೈಲ್ವೇ ಬ್ರಿಡ್ಜ್ನ ವೆಂಟ್ ಕಿರಿದಾಗಿದೆ. ಅದನ್ನು ದೊಡ್ಡದು ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಅನೇಕ ವರ್ಷಗಳಿಂದ ಈ ಸಮಸ್ಯೆ ಆಗುತ್ತಿದೆ ಎಂದರು.
ಮಹದೇವಪುರದ ಪಣತ್ತೂರು ಗಾರ್ಡನ್ನಲ್ಲಿ ನೀರು ಹರಿಯಲು ಸಮಸ್ಯೆ ಆಗುತ್ತಿದೆ. ರಸ್ತೆಯಲ್ಲಿ ಸುಮಾರು ನಾಲ್ಕು ಅಡಿಯಷ್ಟು ನೀರು ನಿಲ್ಲುತ್ತದೆ. ರೈಲ್ವೇ ಅಂಡರ್ ಪಾಸ್ ಅಗಲ 30 ಅಡಿ ಇದೆ. ಇದನ್ನು 30 ಅಡಿ ವಿಸ್ತರಣೆ ಮಾಡಬೇಕು. ರಸ್ತೆ ಅಗಲೀಕರಣ ಮಾಡಬೇಕು. ಈಗಾಗಲೇ ಇದರ ಕಾಮಗಾರಿಗಳು ಆರಂಭವಾಗಿದ್ದು, 80% ಕಾಮಗಾರಿ ಪೂರ್ಣವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇವೆ. 45 ದಿನಗಳಲ್ಲಿ ಪೂರ್ಣ ಕೆಲಸ ಮುಗಿಸಲು ಸೂಚನೆ ನೀಡಲಾಗಿದೆ. ಟ್ರಂಚ್ ಲೆಸ್ ತಂತ್ರಜ್ಞಾನ ಬಳಸಿ ಕೆಲಸ ಮಾಡಲಾಗುತ್ತಿದೆ ಎಂದರು.
ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ನಾಲ್ಕು ಕಡೆಯಿಂದ ನೀರು ಬರುತ್ತದೆ. ಹೀಗಾಗಿ ನೀರು ರಸ್ತೆ ಮೇಲೆ ಬರುತ್ತಿದೆ. ಮೆಟ್ರೋ, ಬಿಬಿಎಂಪಿ, ಎನ್ಹೆಚ್ ಮೂರು ಜನ ಸೇರಿ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಎಲ್ಲರೂ ಕೂತು ತೀರ್ಮಾನ ಮಾಡಲು ಸೂಚಿಸಿದ್ದೇನೆ. ಗುರಪ್ಪನಪಾಳ್ಯದಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗಿದೆ ಎಂದರು.