ಬೆಳಗಾವಿಯ ಖಾದಿ ಉತ್ಸವ ಮತ್ತು ಮಾರಾಟ ಮೇಳದಲ್ಲಿ ಗಾಂಧಿ ಅಜ್ಜನನ್ನು ಹಿಂಬಾಲಿಸಿದ ಅಜ್ಜಿ..

ಬೆಳಗಾವಿ: “ಯಪ್ಪಾ ಗಾಂಧಿ ಅಜ್ಜನ ಆಶೀರ್ವಾದದಿಂದ ಒಂದು ತುತ್ತು ಅನ್ನಾ ಉನ್ನಾತೇವು. ಅವರ ತತ್ವ ಬಿಡಬಾರದು ಅಂತಾ ನಾನು ನೂಲುವುದು ಬಿಟ್ಟಿಲ್ಲ.
ಅದ ನಮಗ ಉಸಿರ ಮತ್ತು ಆಸರ ಆಗೈತಿ. ಆದರೆ, ನಮ್ಮ ಕಡೆ ಸರ್ಕಾರ ಗಮನ ಕೊಟ್ಟು ಪೆನ್ಷನ್ ಶುರು ಮಾಡಿದರ ಬಹಳ ಉಪಕಾರ ಆಗ್ತೈತಿ.” ಬೆಳಗಾವಿ ಸರ್ದಾರ್ಸ್ ಮೈದಾನದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಿಮಿತ್ತ ಆಯೋಜಿಸಿರುವ ಸರಸ್ ಮೇಳ, ಖಾದಿ ಉತ್ಸವ ಮತ್ತು ಮಾರಾಟ ಮೇಳದಲ್ಲಿ ಚರಕದಲ್ಲಿ ನೂಲುತ್ತಿದ್ದ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಅಜ್ಜಿ ಸುವರ್ಣಾ ಚಿನಗುಡಿ ಅವರ ಮನದಾಳದ ಮಾತಿದು.
ಮಾರಾಟ ಮೇಳದ ಬೃಹತ್ ವೇದಿಕೆಯ ಮುಂಭಾಗದಲ್ಲಿ ನೂಲುತ್ತಿರುವ ಅಜ್ಜಿ ಈಗ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಪ್ರತಿಯೊಬ್ಬರೂ ಬಂದು ಅಜ್ಜಿ ನೂಲುವುದನ್ನು ಕುತೂಹಲದಿಂದ ನೋಡುತ್ತಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ಚರಕ ಅಂದರೆ ಏನು?, ಹೇಗೆ ನೂಲುತ್ತಾರೆ ಎಂದೆಲ್ಲಾ ಅಜ್ಜಿ ತಿಳಿಸಿ ಕೊಡುತ್ತಿದ್ದಾರೆ.