
ದಾವಣಗೆರೆ: ಬಿಜೆಪಿಯವರಿಗೆ ಯತ್ನಾಳ್ ಕಾಟವನ್ನೇ ಸಹಿಸಿಕೊಳ್ಳಲು ಆಗ್ತಾ ಇಲ್ಲ, ನಮ್ಮ ಪಕ್ಷದ ವಿಚಾರ ಏನಕ್ಕೆ ಬೇಕು? ಮೊದಲು ಯತ್ನಾಳ್ ವಿಚಾರವನ್ನು ಸರಿಪಡಿಸಿಕೊಳ್ಳಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ನಾಯಕರ ವಿರುದ್ದ ಗರಂ ಆದರು.
ದಾವಣಗೆರೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಭಾಟಿಯಾ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಟಿ ತಮನ್ನಾ ಭಾಟಿಯಾ ಆಯ್ಕೆ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದರು.
“ನಮ್ಮ ರಾಜ್ಯದಲ್ಲಿ ನಟಿಯರು ತುಂಬಾ ಜನರಿದ್ದಾರೆ. ಅವರನ್ನೇ ಆಯ್ಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಬೇರೆ ರಾಜ್ಯದಿಂದ ರಾಯಭಾರಿಯನ್ನು ಕರೆದುಕೊಂಡು ಬರಬಾರದಿತ್ತು. ನಮ್ಮ ರಾಜ್ಯದವರನ್ನೇ ಮಾಡಿದ್ದರೆ ಅನಕೂಲ ಆಗುತ್ತಿತ್ತು” ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, “ನಮ್ಮದು ಹೈಕಮಾಂಡ್ ಪಕ್ಷ, ನಾವು ಪಕ್ಷದ ಶಿಸ್ತಿನ ಸಿಪಾಯಿಗಳು. ಸಚಿವ ಸಂಪುಟ ವಿಸ್ತರಣೆ ಮಾಡಬಹುದು ಅಥವಾ ಬಿಡಬಹುದು, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾವು ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇವೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೊರಾನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಏರ್ಪೋರ್ಟ್ನಲ್ಲಿ ಮಾಸ್ಕ್ ಕಡ್ಡಾಯ ಮಾಡಿದ್ದೇವೆ. ಎಲ್ಲ ಕಡೆ ಮಾಸ್ಕ್ ಕಡ್ಡಾಯ ಮಾಡುವ ಚಿಂತನೆ ಇದೆ. ಈಗಾಗಲೇ ನಾವು ಕೊರೋನಾದಿಂದ ಸಾಕಷ್ಟು ನೋವು ಅನುಭವಿಸಿದ್ದೇವೆ. ನಮ್ಮ ಬಗ್ಗೆ ನಾವೇ ಕೇರ್ ತೆಗೆದುಕೊಳ್ಳಬೇಕು. ಹೀಗಾಗಿ ಏರ್ಪೋರ್ಟ್ನಲ್ಲಿ ಮಾಸ್ಕ್ ಕಡ್ಡಾಯ ಇದೆ. ಯಾರು ಕೂಡ ಭಯ ಬೀಳುವ ಅಗತ್ಯ ಇಲ್ಲ” ಎಂದರು.