ರೈತರಿಗೆ ಗುಡ್ ನ್ಯೂಸ್ ನೀಡಿದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ; ಫೆ. 21ರಿಂದ ನಂದಿನಿ ಹಾಲಿನ ದರ ಪರಿಷ್ಕರಣೆ.

ಗೋಕಾಕ: ನಂದಿನಿ ಹಾಲಿನ ದರವನ್ನು ಫೆ. 21 ರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ನಗರದ ಹೊರವಲಯದಲ್ಲಿರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಎಲ್ಲ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಸಕ್ತ ಎಮ್ಮೆ ಹಾಲಿನ ದರ ಪ್ರತಿ ಲೀ. ₹ 41.60 ದರ ಇದೆ. ಈಗ ₹ 3.40 ಹೆಚ್ಚಳ ಮಾಡಲಾಗುವುದು. ಪ್ರೋತ್ಸಾಹಧನ ₹ 5 ಸೇರಿ ಒಟ್ಟು ₹ 50 ದರ ನಿಗದಿ ಮಾಡಲಾಗಿದೆ . ಅದರಂತೆ ಆಕಳ ಹಾಲಿಗೆ ಪ್ರತಿ ಲೀ ₹ 29.10 ದರ ಇದೆ. ₹ 1 ಹೆಚ್ಚಳ ಮಾಡಲಾಗಿದೆ. ಪ್ರೋತ್ಸಾಹಧನ ₹ 5 ಸೇರಿ ಒಟ್ಟು ₹ 35 ದರ ನಿಗದಿ ಮಾಡಲಾಗಿದೆ. ಹೀಗೆ ನಂದಿನಿ ಹಾಲಿನ ದರ ಪರಿಷ್ಕರಣೆಯಾಗಲಿದೆ. ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ 10 ದಿನದಲ್ಲೇ ಬಿಲ್ ಪಾವತಿ ಮಾಡಲಾಗುತ್ತಿದೆ. ಇದರಿಂದಾಗಿ ರೈತರಿಗೂ, ಗ್ರಾಹಕರಿಗೂ ಅನುಕೂಲವಾಗಿದೆ ಎಂದು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟಕ್ಕೆ ಕಳೆದ ವರ್ಷ ₹ 68 ಲಕ್ಷ ನಿವ್ವಳ ಲಾಭವಾಗಿತ್ತು. ಈಗ ವಾರ್ಷಿಕ ವಹಿವಾಟು ₹ 400 ಕೋಟಿ ಗುರಿಯನ್ನು ಹೊಂದಲಾಗಿದೆ.
ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯವರೆಗೆ ₹ 5 ಕೋಟಿ ಲಾಭ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರತಿ ಮಾಸಿಕ ₹ 42 ಕೋಟಿ ವಹಿವಾಟು ನಡೆಯುತ್ತಿದೆ. ಒಕ್ಕೂಟಕ್ಕೆ ಆಗಿರುವ ಲಾಭವನ್ನು ಮರಳಿ ರೈತರಿಗೆ, ಒಕ್ಕೂಟದ ಸಿಬ್ಬಂದಿಗೆ ನೀಡಲಾಗುವುದು. ಸೊಸೈಟಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು. ಸಂಘಗಳ ನಿರ್ವಹಣೆಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿಯಲ್ಲಿ ಶೀಘ್ರವೇ ಮೆಗಾ ಡೇರಿಯನ್ನು ಸ್ಥಾಪನೆ ಮಾಡಲಾಗುವುದು. ಮೆಗಾ ಡೇರಿ ಸ್ಥಾಪನೆಗೆ ನಿತ್ಯ 3.5 ಲಕ್ಷದಿಂದ 4 ಲಕ್ಷ ಲೀಟರ್ ಹಾಲು ಸಂಗ್ರಹಿಸಬೇಕಾಗುತ್ತದೆ. ಇದರಿಂದಾಗಿ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂವಾಗಲಿದೆ. ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ಉತ್ತರ ಕರ್ನಾಟಕದಲ್ಲಿಯೇ ನಂ. 1 ಮಾಡಲಾಗುವುದು. ಹಾಲು ಪೂರೈಸಿದರೆ ಉತ್ತಮ ದರ ನೀಡಲಾಗುವುದು. ಆಡಳಿತ ಮಂಡಳಿ ಪರಿವರ್ತನೆ, ಬದಲಾವಣೆ ಆಗಿದೆ. ಹೀಗೆಯೇ ಮುಂದುವರೆಸಿದರೆ ದರ ಹೆಚ್ಚು ಸಿಗುತ್ತದೆ. ದರ ಹೆಚ್ಚಳ ಮಾಡಿರುವ ಕುರಿತು ರೈತರಿಗೆ ತಿಳಿಸಿಹೇಳಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಸೊಸೈಟಿಗಳಿಗೆ ಮನವಿ ಮಾಡಿದರು.