
ಹಿರೇಬಾಗೇವಾಡಿ: ‘ತಾರತಮ್ಯವಿಲ್ಲದೇ ಎಲ್ಲ ಗ್ರಾಮಗಳ ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ತಲೆ ಎತ್ತಿ ನೋಡುವಂತೆ ಮಾಡುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ನಡೆದ, ನರೇಗಾ ಅಡಿ ನಿರ್ಮಿಸಿದ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ ಹಾಗೂ ಹಿರೇಬಾಗೇವಾಡಿ ಗ್ರಾಮ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ರಾಮ ಪಂಚಾಯಿತಿಗಳನ್ನು ಬಲಿಷ್ಠಗೊಳಿಸುವುದು, ಸ್ಥಳೀಯರಿಗೆ ಅಧಿಕಾರ ನೀಡಿ, ಅವರಿಗೆ ಶಕ್ತಿ ತುಂಬಬೇಕು ಎಂಬುದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಉದ್ದೇಶವಾಗಿತ್ತು. ಅವರ ದೂರದೃಷ್ಟಿಯ ಫಲವಾಗಿ ಇಂದು ಪಂಚಾಯಿತಿಗಳಿಗೆ ಹೆಚ್ಚು ಅನುದಾನ ಬರುವಂತಾಗಿದೆ’ ಎಂದರು.
‘ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನ ತರುತ್ತೇನೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕರ್ನಾಟಕ ಪಬ್ಲಿಕ್ ಸ್ಕೂಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.