
ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಶಾಸಕ ಯತ್ನಾಳ
ರಾಜ್ಯ ಬಿಜೆಪಿಯಿಂದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕ ಇದೀಗ ಮತ್ತಿಬ್ಬರರು ಶಾಸಕರಿಗೆ ಶಾಕ್ ಎದುರಾಗಿದೆ. ಬಿಜೆಪಿಯು ಉಚ್ಛಾಟನೆಯ ಶಾಕ್ ನೀಡಿದೆ. ಪಕ್ಷದ ವಿರೋಧಿ ಕೆಲಸ ಆರೋಪ ಹಿನ್ನೆಲೆ ಶಾಸಕರಾದ ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ಜೊತೆ ಓಡಾಡ್ತಿದ್ದ ಇಬ್ಬರಿಗೂ ಕೊಕ್ ಕೊಟ್ಟ ಬಿಜೆಪಿ, ಇತರರಿಗೂ ಈ ಮೂಲಕ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಶಾಸಕ ಯತ್ನಾಳ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯಪುರದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಬ್ಬರ ರಕ್ಷಣೆಗಾಗಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಹಳ ಪ್ರಯತ್ನ ಮಾಡಿದರು, ಪಕ್ಷದಿಂದ ಯಾರಾದರೂ ಹೊರಗೆ ಹೋಗೋದಾದರೆ ಅದು ಯತ್ನಾಳ್ ಮಾತ್ರ ನಿಮಗೇನೂ ಆಗಲ್ಲ ಅಂತ ಭರವಸೆ ನೀಡಿದ್ದರು,
ಆದರೆ ಅವರನ್ನು ಉಳಿಸಿಕೊಳ್ಳುವಲ್ಲಿ ತಂದೆ-ಮಗ ವಿಫಲರಾದರು ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆ ಬಗ್ಗೆ ಮಾತಾಡಿದ ಯತ್ನಾಳ್, ಪಾಕಿಸ್ತಾನದ ಮೇಲೆ ನಡೆದ ಯುದ್ಧದ ಕಾರಣ ಮುಂದೂಡಿರಬಹುದು, ಇಷ್ಟರಲ್ಲೇ ಆಗಬಹುದು ಎಂದು ಹೇಳಿದರು. ಇದೇ ವೇಳೆ, ಬಿಜೆಪಿಯಿಂದ ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಉಚ್ಚಾಟನೆಯು ರಾಜ್ಯಾಧ್ಯಕ್ಷ ವಿಜಯೇಂದ್ರನಿಗೆ ಸ್ಪಷ್ಟ ಸಂದೇಶ ಎಂದು ಶಾಸಕ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿಗೆ 160 ಸ್ಥಾನಗಳು ಬರುತ್ತವೆ ಎಂಬುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೋಗಸ್ ಸರ್ವೇ ಮಾಡಿಸಿದ್ದಾರೆ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದ್ದಾರೆ. ವಿಜಯೇಂದ್ರಗೆ ಕ್ರಿಮಿನಲ್ ಬುದ್ದಿ ಇದೆ. ಈಗೇನಾದರೂ ಚುನಾವಣೆ ನಡೆದರೆ 160 ಸ್ಥಾನಗಳು ಬರುತ್ತವೆ ಎಂದು ಸರ್ವೇ ಮಾಡಿಸಿದ್ದಾನೆ. ನಾನು ಸಹ ಯಾವುದೋ ಒಂದು ಏಜೆನ್ಸಿಗೆ ಒಂದು ಕೋಟಿ ರೂಪಾಯಿ ಕೊಟ್ಟು, ಯತ್ನಾಳ್ ಇಲ್ಲದೇ ಬಿಜೆಪಿಗೆ 30 ಸ್ಥಾನ ಬರುತ್ತವೆ ಎಂದು ಸರ್ವೇ ಮಾಡಿಸುತ್ತೇನೆ.
ಈ ರೀತಿ ಹಣ ಕೊಟ್ಟರೆ ಬಹಳ ಜನ ಸರ್ವೇ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಈಗ ವಿಜಯೇಂದ್ರ ಝಿರೋ ಆಗಿದ್ದಾರೆ. ಜನಾಕ್ರೋಶ ಯಾತ್ರೆ ಸಂಪೂರ್ಣವಾಗಿ ವಿಫಲವಾಗಿದೆ. ಅಲ್ಲದೇ, ಪಕ್ಷದಲ್ಲಿ ಸಂಘಟನೆ ಇಲ್ಲ ಎಂದು ಮಾಧ್ಯಮಗಳಲ್ಲೂ ಬರುತ್ತಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ಎಲ್ಲಿ ತೆಗೆದುಹಾಕುತ್ತಾರೋ ಎಂದು ಈ ಬೋಗಸ್ ಸರ್ವೇ ಮಾಡಿಸಿದ್ದಾರೆ. ಅವರಪ್ಪ ಇದ್ದಾಗಲೇ 104 ಬಂದಿಲ್ಲಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಆನೆ ಮೇಲೆ ಕೂಡಿಸಿ ನನ್ನನ್ನು ಬಿಜೆಪಿಗೆ ಮರಳಿ ತೆಗೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಒಟ್ನಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೆ ಒಳಗಾಗಿದ್ದರು ಪ್ರಧಾನಿ ನರೇಂದ್ರ ಮೋದಿಯವರ ನನಗೆ ಆದರ್ಶ ಎನ್ನುವ ಮೂಲಕ ಯತ್ನಾಳ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಹಾಗೂ ವಾಗ್ದಾಳಿ ಮುಂದುವರೆಸಿದ್ದಾರೆ. ಈ ವಾಗ್ದಾಳಿ ಅದೆಷ್ಟು ಪ್ರಭಾವ ಬಿರುತ್ತದೆ ಎಂದು ಕಾದುನೋಡಬೇಕಿದೆ.