Uncategorized
ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಹೆರಾಯಿನ್ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ಸ್ ಅರೆಸ್ಟ್!

ಬೆಳಗಾವಿಯಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ: ಹೆರಾಯಿನ್ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ಸ್ ಅರೆಸ್ಟ್!
ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಹೆರಾಯಿನ್ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಲಿಂಕ್ ಹೊಂದಿದ ಖತರ್ನಾಕ್ ಜಾಲವನ್ನು ಸಿಸಿಬಿ ಪೊಲೀಸರು ಬೇಟೆಯಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಬೆಳಗಾವಿಯ ತಾಂಗಡಿ ಗಲ್ಲಿಯ ಮಹಾದೇವ ಮಂದಿರದ ಹಿಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಹೆರಾಯಿನ್ ಮಾರಾಟ ಮಾಡುತ್ತಿದ್ದ ನಿಖಿಲ್ ಬಳ್ಳಾರಿ, ಕಪೀಲ ಹೊಸುರಕರ ಹಾಗೂ ಆಕಾಶ ಸಾಳುಂಕೆ ಎಂಬ ಮೂವರು ಆರೋಪಿಗಳನ್ನು ಬೆಳಗಾವಿ ನಗರ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ. ಸಿಸಿಬಿ ಪಿಐ ಮಂಜುನಾಥ ನಾಯಕ ಮಾರ್ಗದರ್ಶನದಲ್ಲಿ ಪಿಎಸ್ಐ ಮಂಜುನಾಥ ಭಜಂತ್ರಿ ಮತ್ತು ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆಯಲ್ಲಿ, ಆರೋಪಿಗಳಿಂದ ಒಟ್ಟು 10,31,100 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 9.50 ಲಕ್ಷ ಮೌಲ್ಯದ 47.29 ಗ್ರಾಂ ಹೆರಾಯಿನ್ (466 ಸಣ್ಣ ಚೀಟಿಗಳು), ಒಂದು ಸ್ಕೂಟರ್, 3 ಮೊಬೈಲ್ಗಳು ಹಾಗೂ ನಗದು ಹಣ ಸೇರಿವೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ಮಾದಕ ವಸ್ತುವನ್ನು ಮುಂಬೈನ ಸಾಯಿನ್ ಕೋಳವಾಡಾ ಎಂಬಾಕೆಯಿಂದ ತಂದಿರುವುದಾಗಿ ಬಾಯಿಬಿಟ್ಟಿದ್ದಾರೆ.
ಸದ್ಯ ಆರೋಪಿಗಳ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ತಂಡದ ಈ ಯಶಸ್ವಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.



