
ಐಪಿಎಲ್ ಚಾಂಪಿಯನ್ ಆರ್ಸಿಬಿ ತಂಡಕ್ಕೆ ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂದೆ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನ ಮಾಡಿದರು.
18 ವರ್ಷಗಳ ಬಳಿಕ ಆರ್.ಸಿ.ಬಿ ತಂಡ ಐ ಪಿ ಎಲ್ ಮ್ಯಾಚಿನಲ್ಲಿ ರೋಚಕ ವಿಜಯ ಸಾಧಿಸಿ ಇಂದು ರಾಜಧಾನಿ ಬೆಂಗಳೂರಿಗೆ ಮರಳಿತು. ಈ ಹಿನ್ನೆಲೆ ಕರ್ನಾಟಕ ಸರ್ಕಾರದ ವತಿಯಿಂದ ಅದ್ಧೂರಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿಧಾನಸೌಧ ಗ್ರಾಂಡ್ ಸ್ಟೆಪ್ಸ್ ಮುಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆರ್ಸಿಬಿ ತಂಡದ ಸದಸ್ಯರಿಗೆ ಮೈಸೂರು ಪೇಠಾ ತೊಡಿಸಿ ಆದರದಿಂದ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಸೇರಿದಂತೆ ಸಚಿವರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆರ್‌ಸಿಬಿ ತಂಡವನ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಖುದ್ದು ಸ್ವಾಗತಿಸಿದರು. ಆರ್‌ಸಿಬಿ ತಂಡ ಬೆಂಗಳೂರು ತಲುಪುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ಅಭಿಮಾನಿಗಳು ನೆಚ್ಚಿನ ಆಟಗಾರರಿದ್ದ ಬಸ್‌ನತ್ತ ಕೈಬೀಸುತ್ತ, ಆರ್‌ಸಿಬಿ ಪರ ಘೋಷವಾಕ್ಯ ಮೊಳಗಿಸಿದರು. ರಸ್ತೆಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಲಾಗಿತ್ತು.