ಬೆಂಗಳೂರು ಕಾಲ್ತುಳಿತ ದುರಂತ: ಸಾವಿಗೂ ಮೊದಲು ಮದುವೆಗೆ ಹೆಣ್ಣು ನೋಡಿದ್ದ ಮಂಡ್ಯದ ಯುವಕ

ಮಂಡ್ಯ: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಮಂಡ್ಯದ ಪೂರ್ಣಚಂದ್ರ ಕೂಡ ಒಬ್ಬರು. ದುರಂತದಲ್ಲಿ ಸಾವಿಗೂ ಒಂದು ದಿನ ಮೊದಲು ಯುವಕ ಮದುವೆಗೆ ಹೆಣ್ಣು ನೋಡಿ ಬಂದಿದ್ದ. ಆ ಸಂಬಂಧ ಕುದುರುವ ಮೊದಲೇ ಆತ ಇಹಲೋಕ ತ್ಯಜಿಸಿದ್ದಾನೆ.
ಮಂಡ್ಯದ ಕೆ.ಆರ್ ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ಚಂದ್ರು ಮತ್ತು ಕಾಂತಾಮಣಿ ದಂಪತಿಯ ಪುತ್ರ ಪೂರ್ಣಚಂದ್ರ. ತಂದೆ ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಪೂರ್ಣಚಂದ್ರ ಅತೀವ ಆಸಕ್ತಿ ಹೊಂದಿದ್ದ. ಸಿವಿಲ್ ಇಂಜಿನಿಯರ್ ವ್ಯಾಸಂಗ ಮಾಡಿ ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಸ್ಥನಾಗಿದ್ದ.
ಸಾವಿಗೂ ಮೊದಲು ಹೆಣ್ಣು ನೋಡಿದ್ದ: ಮಂಗಳವಾರ ಮನೆಗೆ ಬಂದಿದ್ದ ಪೂರ್ಣಚಂದ್ರ ಆರ್ಸಿಬಿ ಗೆಲುವನ್ನು ಕುಟುಂಬಸ್ಥರು, ಗೆಳೆಯರೊಂದಿಗೆ ಅದ್ದೂರಿಯಾಗಿ ಆಚರಿಸಿದ್ದ. ಇದಾದ ಮರುದಿನವೇ ಅಂದರೆ ಬುಧವಾರ ಕುಟುಂಬಸ್ಥರೊಂದಿಗೆ ಪಾಂಡವಪುರ ತಾಲೂಕಿನ ಗ್ರಾಮವೊಂದರಲ್ಲಿ ಮದುವೆಗೆ ಹೆಣ್ಣು ನೋಡಲು ತೆರಳಿದ್ದ. ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸುತ್ತಿದೆ ಎಂದು ತಿಳಿದಿದ್ದ.
ಹೆಣ್ಣು ನೋಡಲು ಹೋಗಿದ್ದ ಕುಟುಂಬಸ್ಥರನ್ನು ವಾಪಸ್ ಮನೆಗೆ ತೆರಳಲು ಹೇಳಿ, ತಾನು ಮೈಸೂರಿಗೆ ಹೋಗುವುದಾಗಿ ತಿಳಿಸಿದ್ದ. ಆದರೆ, ಪೂರ್ಣಚಂದ್ರ ಮನೆಯವರಿಗೆ ಸುಳ್ಳು ಹೇಳಿ ಸ್ನೇಹಿತರೊಂದಿಗೆ ನೇರವಾಗಿ ಬೆಂಗಳೂರಿಗೆ ತೆರಳಿದ್ದಾನೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಅಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.
ಸಂತಸದಲ್ಲಿದ್ದ ಕುಟುಂಬಕ್ಕೆ ಸಾವಿನ ಬರಸಿಡಿಲು: ಇತ್ತ, ಮೃತ ಪೂರ್ಣಚಂದ್ರನ ತಂದೆ- ತಾಯಿ ಮಗ ಮೈಸೂರಿಗೆ ಕೆಲಸಕ್ಕೆ ಹೊರಟಿದ್ದಾನೆ. ಮಗನಿಗೆ ಹೆಣ್ಣು ನೋಡಿದ್ದೇವೆ. ಇನ್ನೇನು ಮದುವೆ ನಿಶ್ಚಯ ಆಗಬಹುದು ಎಂದು ಸಂತಸದಲ್ಲಿ ಮನೆಗೆ ಬಂದಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಘೋರ ದುರಂತದಲ್ಲಿ ಮಗ ಸಾವನ್ನಪ್ಪಿದ್ದಾನೆ ಎಂಬ ವಿಷಯ ಬರ ಸಿಡಿಲು ಬಡಿದಂತಾಗಿದೆ.