ಮನುಷ್ಯರನ್ನು ಪ್ರೀತಿಸಿ, ದ್ವೇಷಿಸಬೇಡಿ’

ಕಿತ್ತೂರು: ನಾವೆಲ್ಲರೂ ಭಾರತವನ್ನು ಪ್ರೀತಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆ ಯಾವುದೇ ಜಾತಿ, ಧರ್ಮ, ಭಾಷೆಯವರಾಗಿ
ದ್ದರೂ ಪ್ರೀತಿಸಬೇಕು. ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕೇ ಹೊರತು ದ್ವೇಷ ಮಾಡಬಾರದು. ದ್ವೇಷದ ಬೀಜ ಬಿತ್ತುವವರನ್ನು ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿ ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿ ಹುಟ್ಟುತ್ತಾರೆ. ಆದರೆ ಬೆಳೆಯುತ್ತ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಹೇಳಿದ್ದಾರೆ. ನಾವು ವಿಶ್ವ ಮಾನವರಾಗಬೇಕೇ ಹೊರತು ಅಲ್ಪಮಾನವರಾಗಬಾರದು. ಅನೇಕರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈ ಸ್ವಾತಂತ್ರ್ಯ ಉಳಿಸಿ ಸಮ ಸಮಾಜ ನಿರ್ಮಿಸಬೇಕು. ಮೌಡ್ಯ, ಕಂದಾಚಾರಗಳನ್ನು ತಿರಸ್ಕರಿಸುವ ಮೂಲಕ ಬಸವಣ್ಣನವರನ್ನು ಗೌರವಿಸಿದಂತಾಗುತ್ತದೆ. ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ಬಸವಣ್ಣ ಹೇಳಿದಂತೆ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ, ಕರ್ಮ ಸಿದ್ಧಾಂತ, ಕಂದಾಚಾರಗಳನ್ನು ನಾವು ತಿರಸ್ಕರಿಸಬೇಕು. ಅದೇ ನಾವು ಬಸವಣ್ಣನವರಿಗೆ ಸಲ್ಲಿಸಬೇಕಾದ ಗೌರವ. ಹೀಗಾಗಿಯೇ ನಾವು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಹಿಂದೆ ಯಾರೂ ಇದನ್ನು ಮಾಡಿರಲಿಲ್ಲ ಎಂದರು.