ಬೆಂಗಳೂರು

ಪುಸ್ತಕ ಮೇಳ: ಸ್ಪೀಕರ್, ಸಭಾಪತಿಗಳು ಹೊಸ ಅಧ್ಯಾಯ ಬರೆದಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು : “ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸುವ ಮೂಲಕ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ತಿನ ಸಭಾಪತಿಗಳು ಸೇರಿ ಹೊಸ ಅಧ್ಯಾಯ ಆರಂಭಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಆಯೋಜಿಸಿರುವ ಪುಸ್ತಕ ಮೇಳ ಉದ್ಘಾಟನಾ ಕಾರ್ಯಕ್ರಮಕದಲ್ಲಿ ಅವರು ಗುರುವಾರ ಮಾತನಾಡಿದರು.

“ನಮಗೆ ಅವಕಾಶ ಸಿಕ್ಕಾಗ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ನಾವುಗಳು ನಮ್ಮ ಸ್ಪೀಕರ್ ಯು.ಟಿ ಖಾದರ್ ಹಾಗೂ ಸಭಾಪತಿ ಹೊರಟ್ಟಿ ಅವರನ್ನು ನೋಡಿ ಕಲಿಯಬೇಕು. ಇವರಿಬ್ಬರೂ ಅನೇಕ ಬದಲಾವಣೆ ತಂದಿದ್ದು, ಸುವರ್ಣಸೌಧಕ್ಕೂ ಹೊಸ ರೂಪ ನೀಡುವ ಪ್ರಯತ್ನ ಮಾಡಿದ್ದಾರೆ. ಸರ್ಕಾರದ ಪರವಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಇದನ್ನು ಹೀಗೆ ಮುಂದುವರಿಸಿಕೊಂಡು ಹೋಗಬೇಕು”ಎಂದರು.

“ಒಬ್ಬ ಓದುಗ, ನಾಯಕನಾಗುತ್ತಾನೆ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಹೀಗಾಗಿ ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟಿ ನೀಡುವ ಕೆಲಸ ನಡೆಯುತ್ತಿದೆ. ಪ್ರತಿ ವರ್ಷ ಇದನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ಆದೇಶ ಮಾಡಲಿದೆ ಎಂದು ಸಿಎಂ ಹೇಳಿದ್ದಾರೆ. ಇಲ್ಲಿ ಪುಸ್ತಕ ಹಾಗೂ ಮಸ್ತಕದ ಜಾತ್ರೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ. ಪುಸ್ತಕಗಳ ಮೂಲಕ ಆಚಾರ ವಿಚಾರ ಪ್ರಚಾರ ಮಾಡಲು ನೆರವಾಗುತ್ತದೆ” ಎಂದು ತಿಳಿಸಿದರು.

ನಾನು ಜೀವನದಲ್ಲಿ ಪುಸ್ತಕ ಹಿಡಿದು ಓದಿದವನಲ್ಲ, ಶಾಲೆಯಲ್ಲಿ ಹೇಗೋ ಅಲ್ಪಸ್ವಲ್ಪ ಓದಿ ಪಾಸ್ ಆದೆ. ಡಿಗ್ರಿಯಲ್ಲಿರುವಾಗ ಓದಲೇ ಇಲ್ಲ. ನಾನು ಮಂತ್ರಿಯಾದ ನಂತರ ಮುಕ್ತ ವಿವಿಯಲ್ಲಿ ಪದವಿ ಪಡೆದೆ. ನಾನು ಮೊದಲ ಬಾರಿಗೆ ವಿಧಾನ ಸಭೆಗೆ ಬಂದಾಗ, ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ನಾಣಯ್ಯ ಅವರಂತಹ ಘಟಾನುಘಟಿಗಳು ಮಾತನಾಡುವಾಗ ನಾನು ಹೆಚ್ಚು ಓದಬೇಕಿತ್ತು ಎಂದು ಅನ್ನಿಸಿತ್ತು” ಎಂದು ಹೇಳಿದರು.

“ನಾನು ಓದಬೇಕು ಎಂದು ಪುಸ್ತಕ ಖರೀದಿ ಮಾಡುತ್ತೇನೆ. ಆದರೆ ಒಂದು ಪುಟ ಓದುವುದರೊಳಗೆ ಸುಸ್ತಾಗುತ್ತೇನೆ. ನಮ್ಮ ಮುಖ್ಯಮಂತ್ರಿಗಳು ದಿನ ಬೆಳಗ್ಗೆ ಪತ್ರಿಕೆ ಹಾಗೂ ಹೆಚ್ಚು ಪುಸ್ತಕ ಓದುತ್ತಾರೆ ಎಂದು ಕೇಳಿದ್ದೇನೆ. ಪುಸ್ತಕಗಳು ಜ್ಞಾನದ ಭಂಡಾರ. ಈಗ ಮೊಬೈಲ್ ಫೋನ್ ಗಳು ಬಂದಿದ್ದು, ಎಲ್ಲಾ ಮಾಹಿತಿಗಳು ಅಂಗೈಯಲ್ಲಿ ಲಭ್ಯವಿದೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರಿದಿದೆ. ಆದರೂ ಪುಸ್ತಕಗಳನ್ನು ಓದುವ ಹವ್ಯಾಸ ಇಟ್ಟುಕೊಳ್ಳಬೇಕು.

ವಿಧಾನಸೌಧದ ಆವರಣದಲ್ಲಿ ಈ ಪುಸ್ತಕ ಮೇಳ ಮುಂದಿನ ಪ್ರತಿ ವರ್ಷವೂ ನಡೆಯುವ ರೀತಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button