Uncategorized

ಕನ್ನಡದ ಕಂಪು ಅಂತರ್ಜಾಲದಲ್ಲೂ ಪಸರಿಸಬೇಕು

ಕನ್ನಡದ ಕಂಪು ಅಂತರ್ಜಾಲದಲ್ಲೂ ಪಸರಿಸಬೇಕು

ತಂತ್ರಜ್ಞಾನವೆಂಬುದು ಈಗ ಸರ್ವವ್ಯಾಪಿಯಾಗಿದೆ. ನಗರವಾಸಿಗಳು ಮಾತ್ರ ಇಂಟರ್ನೆಟ್‌ ಮತ್ತು ಇ-ಮೇಲ್‌ ಬಳಸುತ್ತಾರೆ ಎಂಬ ಕಾಲವೊಂದಿತ್ತು. ಆದರೆ ಈಗ ಹಳ್ಳಿಗಳ ಜನರೂ ಅಂತರ್ಜಾಲಕ್ಕೆ ಒಗ್ಗಿಹೋಗಿದ್ದಾರೆ. ಕಂಪ್ಯೂಟರ್‌, ಮೊಬೈಲ್‌ಗ‌ಳಲ್ಲಿ ಕನ್ನಡದ ಬಳಕೆ ಈಗ ಹೇಗಿದೆ? ಮೊಬೈಲ್‌/ ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ ಹೆಚ್ಚಬೇಕೆಂದರೆ ಏನು ಮಾಡಬೇಕು?

ಈ ನಿಟ್ಟಿನಲ್ಲಿ ಎದುರಾಗುವ ಸವಾಲುಗಳು ಮತ್ತು ಅದಕ್ಕಿರುವ ಪರಿಹಾರಗಳ ಕುರಿತು ಇಲ್ಲಿ ವಿವರಣೆಯಿದೆ…

ನಮ್ಮ ದೇಶದಲ್ಲಿ ಸಾರ್ವಜನಿಕರಿಗೂ ಅಂತರ್ಜಾಲ ಸಂಪರ್ಕ ದೊರಕುವಂತಾದದ್ದು 1995ರಲ್ಲಿ. ಮುಂದಿನ ಕೆಲವು ವರ್ಷಗಳಲ್ಲಿ ಆ ಸೌಲಭ್ಯವನ್ನು ಬಳಸಿಕೊಳ್ಳುವ ಅಭ್ಯಾಸವೂ ನಿಧಾನಕ್ಕೆ ಬೆಳೆಯಿತು. ಅಂದಿನ ಅಂತರ್ಜಾಲ ಸಂಪರ್ಕಗಳೂ ನಿಧಾನವಾಗಿಯೇ ಇದ್ದವೆನ್ನಿ. ಸೈಬರ್‌ ಕೆಫೆಗಳಲ್ಲಿ ಗಂಟೆಗಿಷ್ಟರಂತೆ ದುಡ್ಡು ಕೊಟ್ಟು ಬ್ರೌಸಿಂಗ್‌ ಮಾಡಬೇಕಿದ್ದ ಕಾಲ ಅದು. ಒಮ್ಮೆ ಇ-ಮೇಲ್‌ ಚೆಕ್‌ ಮಾಡಿ ಒಂದೆರಡು ತಾಣಗಳೊಳಗೆ ಇಣುಕುವಷ್ಟರಲ್ಲಿ ಅದು ಹೇಗೋ ಅರ್ಧ ಗಂಟೆ ಆಗಿಯೇ ಹೋಗಿರುತ್ತಿತ್ತು!

ನಿಧಾನಗತಿಯ ಸಂಪರ್ಕ, ದುಬಾರಿ ದರ, ಕಂಪ್ಯೂಟರಿನಲ್ಲೇ ಬಳಸಬೇಕಾದ ಅನಿವಾರ್ಯತೆಗಳೆಲ್ಲ ಸೇರಿಕೊಂಡು ಅಂತರ್ಜಾಲ ಸಂಪರ್ಕ, ಅನೇಕ ವರ್ಷಗಳ ಕಾಲ ಹೆಚ್ಚಿನ ಜನರನ್ನು ತಲುಪಿಯೇ ಇರಲಿಲ್ಲ. ಮೂವತ್ತು ವರ್ಷದಷ್ಟೆಲ್ಲ ಹಳೆಯ ಮಾತೇಕೆ, ಈಗ ಹತ್ತು ವರ್ಷ ಹಿಂದೆಯೂ ಭಾರತದಲ್ಲಿ ಅಂತರ್ಜಾಲ ಸಂಪರ್ಕ ಬಳಸುವವರ ಪ್ರಮಾಣ ಶೇ. 20ಕ್ಕಿಂತ ಕಡಿಮೆಯಿತ್ತು.

ಅಂದಿನಿಂದ ಇಂದಿನವರೆಗೆ ನಡೆದಿರುವ ಅಗಾಧ ಬದಲಾವಣೆ ನಮಗೆ ತಿಳಿದೇ ಇದೆ. 2024ರ ಅಂಕಿ ಅಂಶಗಳ ಪ್ರಕಾರ, ನಮ್ಮ ದೇಶದ ಜನಸಂಖ್ಯೆಯ ಶೇ. 60ಕ್ಕೂ ಹೆಚ್ಚು ಮಂದಿ ಅಂತರ್ಜಾಲದ ಸಂಪರ್ಕದಲ್ಲಿದ್ದಾರೆ! ಅಂತರ್ಜಾಲದ ವ್ಯಾಪ್ತಿ ನಮ್ಮ ದೇಶದೊಳಗೆ ಇಷ್ಟೆಲ್ಲ ವಿಸ್ತರಿಸಿಕೊಂಡಿರುವುದರಿಂದ ಏನು ಲಾಭ? ಅದು ನಮ್ಮ ಭಾಷೆಗಳಿಗೆ ಅವಕಾಶದ ಹೊಸ ಜಗತ್ತನ್ನೇ ತೆರೆದಿಡುತ್ತಿದೆ!

ಅಂತರ್ಜಾಲದಲ್ಲಿ ನಮ್ಮ ಭಾಷೆ
ಅದು ಹೇಗೆ? ಮೊದಲಿಗೆ ಅಂತರ್ಜಾಲದ ಸಂಪರ್ಕಕ್ಕೆ ಬಂದವರು ನಗರವಾಸಿಗಳು ಎಂದೇ ಇಟ್ಟುಕೊಂಡರೆ, ಈಚೆಗೆ ಅಂತರ್ಜಾಲದ ವ್ಯಾಪ್ತಿಯೊಳಕ್ಕೆ ಬರುತ್ತಿರುವವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರು. ನಮಗೆ ದೊರಕುವ ಮಾಹಿತಿ ನಮ್ಮ ಭಾಷೆಯಲ್ಲೇ ಇರಬೇಕು ಎನ್ನುವವರು ಅವರು. ಇದರ ಜತೆಗೆ, ನಮ್ಮ ಭಾಷೆಯ ಮಾಹಿತಿ ನಮಗೂ ಬೇಕೆಂಬ ಮನೋಭಾವ ನಗರ ಪ್ರದೇಶಗಳಲ್ಲೂ ಬೆಳೆಯುತ್ತಿದೆ.

ಇವೆಲ್ಲದರ ಒಟ್ಟು ಪರಿಣಾಮವಾಗಿ, ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳಲ್ಲಿರುವ ಮಾಹಿತಿಗೆ ಬೇಡಿಕೆ ಹೆಚ್ಚಾಗಿದೆ. ಇಂಟರ್ನೆಟ್‌ ಆಂಡ್‌ ಮೊಬೈಲ್‌ ಅಸೋಸಿಯೇಶನ್‌ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, ನಮ್ಮ ದೇಶದ ಅಂತರ್ಜಾಲ ಬಳಕೆದಾರರ ಪೈಕಿ ಅರ್ಧಕ್ಕೂ ಹೆಚ್ಚು ಜನ ಭಾರತೀಯ ಭಾಷೆಗಳಲ್ಲಿನ ಮಾಹಿತಿಯನ್ನೇ ಹೆಚ್ಚು ಇಷ್ಟಪಡುತ್ತಾರಂತೆ. ಇದು ಖುಷಿಪಡುವ ವಿಷಯವೇನೋ ಸರಿ, ಆದರೆ ಈ ಸಂಭ್ರಮವನ್ನು ಕನ್ನಡಕ್ಕೆ ನೇರವಾಗಿ ಅನ್ವಯಿಸಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ, ಕನ್ನಡದ ಮಾಹಿತಿಯನ್ನು ಆರಿಸಿಕೊಳ್ಳುತ್ತಿರುವವರ ಪ್ರಮಾಣ ಇಂದಿಗೂ ಬಹಳ ಕಡಿಮೆ ಪ್ರಮಾಣದಲ್ಲಿದೆ!

Related Articles

Leave a Reply

Your email address will not be published. Required fields are marked *

Back to top button