ನಟ ದುನಿಯಾ ವಿಜಿಯಿಂದ ಜೈಲಿನಿಂದ ಹೊರಬಂದಿದ್ದ ವ್ಯಕ್ತಿಯಿಂದ ಜೋಡಿ ಕೊಲೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ (Duniya Vijay) ಅವರ ಸಹಾಯದಿಂದ ಜೈಲಿನಿಂದ ಆಚೆ ಬಂದಿದ್ದ ವ್ಯಕ್ತಿಯೊಬ್ಬ ಜೋಡಿ ಕೊಲೆಯೊಂದರ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೊರವಲಯ ಬಾಗಲೂರಿನಲ್ಲಿ ನವೆಂಬರ್ 8 ರ ರಾತ್ರಿ ಜೋಡಿಕೊಲೆ ನಡೆದಿತ್ತು.
ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಎನ್ನುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಈ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಸುರೇಶ್ ಎನ್ನುವಾತನನ್ನು ಬಂಧಿಸಿದ್ದಾರೆ. ಬಂಧನ ಬಳಿಕ ಈ ಸುರೇಶ್ ಯಾರು ಎನ್ನುವುದರ ಹಿನ್ನೆಲೆ ಬಹಿರಂಗವಾಗಿದೆ.
ಈ ಹಿಂದೆ ಸುರೇಶ್ ಕೊಲೆ ಹಾಗೂ ಅತ್ಯಚಾರ ಪ್ರಕರಣ ಸಂಬಂಧ 10 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದ. ಈತ ಜೈಲಿನಿಂದ ಹೊರಬರಲು ಶ್ಯೂರಿಟಿ ಹಣ ನೀಡಲು ಯಾರೂ ಸಹ ಮುಂದೆ ಬಂದಿರಲಿಲ್ಲ. ಇದೇ ವೇಳೆ ನಟ ದುನಿಯಾ ವಿಜಯ್ ಅವರು ಒಂದಷ್ಟು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ರಿಲೀಸ್ ಮಾಡಿಸಿದ್ದರು.
ಜೈಲಿನಿಂದ ಹೊರಬಂದ ಬಳಿಕ ಸುರೇಶ್ ಮಾರ್ಕೆಟ್ ವೊಂದರಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಈ ಸಂದರ್ಭದಲ್ಲಿ ಮಾರ್ಕೆಟ್ ಪಕ್ಕದಲ್ಲಿದ್ದ ನಾಗೇಶ್ ಮತ್ತು ಮಂಜುನಾಥ್, ‘ನೀನು ಕಳ್ಳ, ಕೊಲೆಗಾರ’ ಎಂದು ಸುರೇಶ್ಗೆ ಆಗಾಗ ಹೀಯಾಳಿಸುತ್ತಿದ್ದರು. ಇದಕ್ಕೆ ಸಿಟ್ಟಾದ ಸುರೇಶ್ ಇಬ್ಬರನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸುರೇಶ್ ನನ್ನು ಬಂಧಿಸಿದ್ದಾರೆ.