
ಮುಗಳಖೋಡ: ‘ಪಂಚಮಸಾಲಿ ಸಮುದಾಯಕ್ಕೆ ಡಿ.9ರೊಳಗೆ ಪ್ರವರ್ಗ ‘2ಎ’ ಮಿಸಲಾತಿ ಸಿಗದಿದ್ದರೆ, ವಿಧಾನಮಂಡಲ ಚಳಿಗಾಲ ಅಧಿವೇಶನ ವೇಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇಲ್ಲಿನ ಬಸವಶ್ರೀ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ನಡೆದ ರಾಯಬಾಗ ತಾಲ್ಲೂಕಿನ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ‘ರೈತರು, ವಿದ್ಯಾರ್ಥಿಗಳು, ವಕೀಲರು ಸೇರಿದಂತೆ ಪಂಚಮಸಾಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಲು ಸಿದ್ದರಾಗಬೇಕು’ ಎಂದು ಕರೆ ನೀಡಿದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ನಮ್ಮ ಸಮುದಾಯದ ಸಹಕಾರ ಇಲ್ಲದೆ, ರಾಜ್ಯ ಸರ್ಕಾರ ಅಧಿಕಾರ ನಡೆಸಲು ಸಾಧ್ಯವಿಲ್ಲ. ಆದರೂ, ನಮ್ಮನ್ನು ಕಡೆಗಣಿಸಲಾಗುತ್ತಿದೆ. ಹಾಗಾಗಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧರಾಗಿದ್ದೇವೆ’ ಎಂದರು.
ಶಶಿಕಾಂತ ಪಡಸಲಗಿ, ನಿಂಗಪ್ಪ ಪಿರೋಜಿ, ಬಸಗೌಡ ಖೇತಗೌಡರ, ಸುರೇಶ ಹೊಸಪೇಟೆ, ರಮೇಶ ಖೇತಗೌಡರ, ಶಿವಬಸು ಕಾಪಸಿ, ಅಶೋಕ ಕೊಪ್ಪದ, ಸಂಗಪ್ಪ ಜಂಬಗಿ, ಸುರೇಶ ಜಂಬಗಿ, ನಾಗಪ್ಪ ಹುಕ್ಕೇರಿ, ಶ್ರೀಕಾಂತ ಖೇತಗೌಡರ, ಕೆಂಪಯ್ಯ ಅಂಗಡಿ, ಧರೆಪ್ಪ ಠಕ್ಕನ್ನವರ ಇದ್ದರು.