ರೈತರಿಗೆ ವಕ್ಫ್ ನೋಟೀಸ್ ಖಂಡಿಸಿ ಸರ್ಕಾರದ ವಿರುದ್ದ ಬಿಜೆಪಿ ಭಿನ್ನಮತೀಯರಿಂದ ಜನಜಾಗೃತಿ ಅಭಿಯಾನ
ರೈತರಿಗೆ ವಕ್ಫ್ ನೋಟೀಸ್ ಖಂಡಿಸಿ ಸರ್ಕಾರದ ವಿರುದ್ದ ಬಿಜೆಪಿ ಭಿನ್ನಮತೀಯರಿಂದ ಜನಜಾಗೃತಿ ಅಭಿಯಾನ

ಬೆಂಗಳೂರು,ನ.15- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡುತ್ತಿರುವ ಸರ್ಕಾರದ ವಿರುದ್ದ ನ.25ರಿಂದ ಡಿ.25ರವರೆಗೆ ಬೀದರ್ನಿಂದ ಜನಜಾಗೃತಿ ಅಭಿಯಾನ ಬಿಜೆಪಿ ಭಿನ್ನಮತೀಯರ ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚಿಹ್ನೆಯಡಿ ಜನಜಾಗೃತಿ ಅಭಿಯಾನವನ್ನು ಪ್ರಾರಂಭಿಸಿರುವ ಭಿನ್ನಮತೀಯ ನಾಯಕರು ಸಾರ್ವಜನಿಕರು ವಕ್ಫ್ ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ 9035675734 ಈ ವಾಟ್ಸಪ್ ನಂಬರಿಗೆ ಸಂದೇಶ ಕಳುಹಿಸಲು ಮನವಿ ಮಾಡಿದ್ದಾರೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಈ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ ಜಾರಕಿಹೊಳಿ, ಕುಮಾರಬಂಗಾರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಅಭಿಯಾನದ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಈಗಾಗಲೇ ಬಹಳ ಸುದ್ದಿ ಯಲ್ಲಿರುವ ಜನರಿಗೆ ತೊಂದರೆ ಆಗುತ್ತಿರುವ ವಕ್ಫ ನಮೆಲ್ಲರ ಗಮನಕ್ಕೆ ಬಂದಿದೆ. ಯತ್ನಾಳ್ ಬಿಜಾಪುರದಲ್ಲಿ ಹೋರಾಟ ಪ್ರಾರಂಭ ಮಾಡಿದ್ದರು. ಯತ್ನಾಳ್ ಹೋರಾಟದ ಪರಿಣಾಮವಾಗಿ ಕೇಂದ್ರದ ವಕ್ಫ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಯತ್ನಾಳ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಿದ್ದರು ಎಂದು ತಿಳಿಸಿದರು.
ವಕ್ಫ ವಿಚಾರದಲ್ಲಿ ಸಾಕಷ್ಟು ದೂರು ಬಂದಿದೆ. ನವಂಬರ್ 25 ರಿಂದ ಡಿಸೆಂಬರ್ 25 ವರೆಗೂ ಜನ ಜಾಗೃತಿ ಅಭಿಯಾನ ಮಾಡುತ್ತೇವೆ. ಒಂದು ವಾರ್ ರೂಮ್ ಸಹ ಪ್ರಾರಂಭ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಮುಖ್ಯವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟ ಲಿಂಬಾವಳಿ, 1954 ರಿಂದ ಆರಂಭವಾದ ಗೆಜೆಟ್ ಆದೇಶವನ್ನು ರದ್ದು ಮಾಡಬೇಕು, ರೈತರು, ಮಠಗಳು, ಸರ್ಕಾರಿ ಜಾಗಗಳಿಗೆ ವಕ್‌್ಫ ಕ್ಲೈಮ್ ಮಾಡುತ್ತಿದೆ. ಆ ಜಾಗಗಳನ್ನು ಖಾಯಂ ವಾಪಸ್ ಕೊಡಬೇಕು ಹಾಗೂ ಅನ್ವರ್ ಮಾನ್ಪಾಡಿ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನ ನಡೆಯಲಿದೆ. ಬೀದರ್ ಜಿಲ್ಲೆಯಿಂದ ಅಭಿಯಾನ ಪ್ರಾರಂಭವಾಗಿ ಕಲಬುರಗಿ, ಯಾದಗಿರಿ, ಬಿಜಾಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಮೂಲಕ ಸಾಗಲಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ರೈತರು, ಮಠಗಳಿಗೆ ವಕ್‌್ಫ ಆದೇಶದಿಂದ ಅನ್ಯಾಯವಾಗುತ್ತಿದೆ. ನಾವು ಕೇಳುತ್ತಿರುವುದು ಕ್ರಿಮಿನಲ್ ಪ್ರಕರಣಗಳು ರದ್ದಾಗಿ ಎಲ್ಲವೂ ನ್ಯಾಯಾಲಯದ ಮೂಲಕವೇ ತೀರ್ಮಾನವಾಗಬೇಕು ಎಂದು ಮನವಿ ಮಾಡಿದರು.