ಬೆಳಗಾವಿರಾಜಕೀಯರಾಜ್ಯ

ಬೆಳಗಾವಿ: ಹರಗಾಪುರ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಹೊಸ ತಿರುವು

ಬೆಳಗಾವಿ: ಹರಗಾಪುರ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಹೊಸ ತಿರುವು

ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಹರಗಾಪುರ ಬಳಿ ಇಬ್ಬರು ದುಷ್ಕರ್ಮಿಗಳು ತಮ್ಮ ಕಾರು ಅಡ್ಡಗಟ್ಟಿ, ಗನ್‌ ತೋರಿಸಿ ಹಣ ದೋಚಲಾಗಿದೆ’ ಎಂದು ಸಂಕೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದ ಪ್ರಕರಣ ಈಗ ಹೊಸ ತಿರುವು ಪಡೆದಿದೆ.

ದೂರುದಾರ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆ ಕಾರಿನಲ್ಲಿ ₹1.01 ಕೋಟಿ ಹಣ ಪತ್ತೆಯಾಗಿತ್ತು.

‘ಕೊಲ್ಹಾಪುರದಿಂದ ಬರುತ್ತಿದ್ದ ಕಾರನ್ನು ನ.15ರಂದು ಹರಗಾಪುರ ಬಳಿ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಸೂರಜ್ ಹೊನಮಾನೆ ದೂರು ಕೊಟ್ಟಿದ್ದರು. ಆದರೆ, ನೇರ್ಲಿ ಬಳಿ ಕಾರು ಪತ್ತೆಯಾಗಿದೆ. ದೂರು ಕೊಟ್ಟವರ ಮೇಲೆಯೇ ಸಂಶಯ ಬಂದಿದೆ. ಹಾಗಾಗಿ ಕಾರು ಚಾಲಕ ಆರೀಫ್‌ ಶೇಖ್‌, ಅದರಲ್ಲಿ ಪ್ರಯಾಣಿಸುತ್ತಿದ್ದ ಸೂರಜ್‌ ಮತ್ತು ಅಜಯ ಸರಗಾರ ಅವರನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘₹75 ಲಕ್ಷ ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ, ಕಾರಿನಲ್ಲಿ ₹1.01 ಕೋಟಿ ಸಿಕ್ಕಿದೆ. ಈ ಬಗ್ಗೆ ದೂರು ಕೊಟ್ಟವರನ್ನು ಕೇಳಿದಾಗ, ವ್ಯಾಪಾರಿಯೊಬ್ಬರು ಕೊಟ್ಟ ಹಣ ಎಣಿಸದೆ ತೆಗೆದುಕೊಂಡು ಬರುತ್ತಿದ್ದೆವು. ₹75 ಲಕ್ಷ ಇರಬಹುದೆಂದು ಭಾವಿಸಿದ್ದೆವು ಎಂದು ಹೇಳಿಕೆ ಕೊಟ್ಟಿದ್ದಾರೆ. ಎಲ್ಲ ಆಯಾಮಗಳಿಂದ ತನಿಖೆ ನಡೆದಿದೆ’ ಎಂದು ತಿಳಿಸಿದರು.

‘ಕಾರಿನ ಮುಂದಿನ ಎರಡು ಸೀಟುಗಳ ಮಧ್ಯೆ ಇರುವ ಗೇರ್‌ಬಾಕ್ಸ್‌ ಮತ್ತು ಹ್ಯಾಂಡ್‌ಬ್ರೇಕ್‌ ಕೆಳಗಿನ ಮೂಲವಿನ್ಯಾಸ ಬದಲಿಸಿ, ಅದರಲ್ಲಿ ಬಾಕ್ಸ್‌ ರಚಿಸಿದ್ದರು. ಅದರಲ್ಲೇ ಹಣ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಮೋಟಾರು ವಾಹನಗಳ ಕಾಯ್ದೆಯಡಿ ಕಾರಿನ ಮಾಲೀಕರ ವಿರುದ್ಧ ಸಹ ದೂರು ದಾಖಲಿಸಿದ್ದೇವೆ’ ಎಂದರು.

‘ಮಹಾರಾಷ್ಟ್ರದ ಸಾಂಗ್ಲಿಯ ಭರತ್‌ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೇ ಚಿನ್ನ ಮಾರಾಟ ಮಾಡುತ್ತಾರೆ. ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಹಳೇ ಚಿನ್ನ ಕಳುಹಿಸುತ್ತಿದ್ದರು. ಇಲ್ಲಿಂದ ಕೇರಳಕ್ಕೆ ಹಣ ಹೋಗುತ್ತಿತ್ತು. ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೇರಳ, ಮಹಾರಾಷ್ಟ್ರ ಮತ್ತು ಸ್ಥಳೀಯವಾಗಿಯೂ ಮೂರು ತಂಡಗಳು ತನಿಖೆ ಕೈಗೊಳ್ಳುತ್ತಿವೆ’ ಎಂದು ಹೇಳಿದರು.

‘₹1 ಕೋಟಿಗೂ ಅಧಿಕ ಮೊತ್ತ ಪತ್ತೆಯಾದ ಕಾರಣ, ತೆರಿಗೆ ಇಲಾಖೆಗೂ ಈ ಕುರಿತು ಮಾಹಿತಿ ಕೊಟ್ಟಿದ್ದೇವೆ’ ಎಂದರು.

Related Articles

Leave a Reply

Your email address will not be published. Required fields are marked *

Back to top button