ಇಂಗ್ಲಿಷ್ ಮೇಲಿನ ಅಕ್ಕರೆ, ಕಾನ್ವೆಂಟ್ ವ್ಯಾಮೋಹ ;ಗಡಿ ಜಿಲ್ಲೆಯಲ್ಲಿ ಮುಚ್ಚಿದ 20 ಸರ್ಕಾರಿ ಶಾಲೆಗಳು ಬಂದ್

ಚಾಮರಾಜನಗರ: ಇಂಗ್ಲಿಷ್ ಮೇಲಿನ ಅಕ್ಕರೆ, ಕಾನ್ವೆಂಟ್ ವ್ಯಾಮೋಹ ಹಾಗೂ ಸಾರಿಗೆ ತೊಂದರೆಯಿಂದಾಗಿ ಕಳೆದೆರಡು ಶೈಕ್ಷಣಿಕ ವರ್ಷಗಳಲ್ಲಿ 20 ಸರ್ಕಾರಿ ಶಾಲೆಗಳು ಬಂದ್ ಆಗಿವೆ.
2023-24ರಲ್ಲಿ 12 ಮತ್ತು ಈ ಸಾಲಿನಲ್ಲಿ 8 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಶೂನ್ಯ ದಾಖಲಾತಿಯಿಂದ ಬಂದ್ ಆಗಿವೆ. ಪ್ರಿ ಕೆಜಿಗಳನ್ನು ಆರಂಭಿಸಿದರೆ, ಇಂಗ್ಲಿಷ್ ಮಾಧ್ಯಮ ಇದ್ದರೆ, ಶಾಲಾ ವಾಹನ ಸೌಲಭ್ಯ ಕಲ್ಪಿಸಿದರೆ ಮಾತ್ರ ಸರ್ಕಾರಿ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಣ ಇಲಾಖೆಗೆ ತಿಳಿಸುತ್ತಿದ್ದಾರೆ.
ಯಾವ್ಯಾವ ಶಾಲೆಗಳು ಬಂದ್?: 2023 ಮತ್ತು 24ನೇ ಸಾಲಿನಲ್ಲಿ ಚಾಮರಾಜನಗರ ತಾಲೂಕಿನ ಸಾಣೇಗಾಲ, ಕಳ್ಳಿಪುರ, ಪುಟ್ಟೇಗೌಡನಹುಂಡಿ, ಹೊಸಹಳ್ಳಿ 2024-25ನೇ ಸಾಲಿನಲ್ಲಿ ಮೂಡ್ಲುಪುರ, ಗೆಜ್ಜಲ್ ಪಾಳ್ಯ, ಅಂಚಿತಾಳಪುರ, ಗೋವಿಂದವಾಡಿ, ಕುರುಬರಹುಂಡಿ ಸರ್ಕಾರಿ ಶಾಲೆಗಳು ಬಂದಾಗಿವೆ. ಮುಚ್ಚಲ್ಪಟ್ಟಿದ್ದ ಕಿರಗಸೂರು ಶಾಲೆಯನ್ನು ಪುನಾರಂಭಿಸಲಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಬರಗಿ ಕಾಲೊನಿ, ಮೇಲುಕಾಮನಹಳ್ಳಿ, ಮರಳಾಪುರ ಶಾಲೆ 2024-25ನೇ ಸಾಲಿನಲ್ಲಿ ಹುತ್ತೂರು, ಕಬ್ಬಳ್ಳಿ, ಈದ್ಗಾ ಮೊಹಲ್ಲಾ, ಹಕ್ಕಲಪುರ ಶಾಲೆಗಳು ಬಂದ್ ಆಗಿದ್ದು ಮುಚ್ಚಲ್ಪಟ್ಟಿದ್ದ ಹೊಸಪುರ, ಉತ್ತನಗೆರೆಹುಂಡಿ ಶಾಲೆಗಳು ಪುನಾರಂಭಗೊಂಡಿವೆ.ಹನೂರು ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಚಂಗಡಿ, ಎಡಳಿದೊಡ್ಡಿ ಶಾಲೆಗಳು, ಯಳಂದೂರು ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ದಾಸನಹುಂಡಿ ಶಾಲೆಗಳು ಬಂದ್ ಆಗಿವೆ.