ಮಹಾಂತೇಶ ಕವಟಗಿಮಠರಿಗೆ ನಾಗನೂರು ರುದ್ರಾಕ್ಷಿಮಠದ ‘ಸೇವಾರತ್ನ ಪ್ರಶಸ್ತಿ
ಮಹಾಂತೇಶ ಕವಟಗಿಮಠರಿಗೆ ನಾಗನೂರು ರುದ್ರಾಕ್ಷಿಮಠದ ‘ಸೇವಾರತ್ನ ಪ್ರಶಸ್ತಿ

ಮಹಾಂತೇಶ ಕವಟಗಿಮಠರಿಗೆ ನಾಗನೂರು ರುದ್ರಾಕ್ಷಿಮಠದ ‘ಸೇವಾರತ್ನ ಪ್ರಶಸ್ತಿ
ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಎಲ್‍ಇ ಸಂಸ್ಥೆಯ ನಿರ್ದೇಶಕರಾಗಿರುವ ಮಹಾಂತೇಶ ಕವಟಗಿಮಠ ಅವರಿಗೆ ನಾಗನೂರು ರುದ್ರಾಕ್ಷಿಮಠವು ಕಾಯಕಯೋಗಿ ಶತಾಯುಷಿ ಲಿಂಗೈಕ್ಯ ಪೂಜ್ಯ ಡಾ.ಶಿವಬಸವ ಮಹಾಸ್ವಾಮೀಜಿಯವರ 135ನೇ ಜಯಂತಿ ಉತ್ಸವ ನಿಮಿತ್ತವಾಗಿ ಕೊಡಮಾಡುವ ‘ಸೇವಾರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಿದೆ.
ಮಹಾಂತೇಶ ಕವಟಗಿಮಠ ಅವರು ಕಳೆದ 25 ವರ್ಷಗಳಿಂದ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾಗಿ ಹಾಗೂ 27 ವರ್ಷಗಳ ಕಾಲ ಚಿಕ್ಕೋಡಿಯ ದೂದಗಂಗಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಅಲ್ಲದೇ 10 ವರ್ಷಗಳ ಕಾಲ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಸಲ್ಲಿದ್ದಾರೆ.
ಮಹಾಂತೇಶ ಕವಟಗಿಮಠ ಅವರು ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಗ್ರಾಮ ಪಂಚಾಯತ್‍ಗಳ ಅಭಿವೃದ್ಧಿಯಲ್ಲಿ ವಹಿಸಿರುವ ಪಾತ್ರ ಅತ್ಯಂತ ಹಿರಿದಾದುದು. ‘ಶ್ರೀ ಮಹಾಂತೇಶ ಕವಟಗಿಮಠ ಚಾರಿಟೇಬಲ್ ಟ್ರಸ್ಟ್’ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ‘ಸದನದ ಒಳಗೆ ಹೊರಗೆ’ ಆತ್ಮಕಥನವನ್ನು ಗ್ರಂಥರೂಪದಲ್ಲಿ ಪ್ರಕಟಿಸಿರುವ ಮಹಾಂತೇಶ ಕವಟಗಿಮಠ ಅವರು ಜನರ ಧ್ವನಿಯಾಗಿ ಸದನದಲ್ಲಿ ಕೈಗೊಂಡ ಸಮಗ್ರ ಚಿತ್ರಣ ನಾಡಿನ ಯುವಜನಾಂಗಕ್ಕೆ ಪ್ರೇರಕವಾಗಿದೆ.
ಅವರ ಒಟ್ಟು ಸಾಮಾಜಿಕ ಕಳಕಳಿ ಹಾಗೂ ಸೇವೆಯನ್ನು ಅವಲೋಕಿಸಿ ಶ್ರೀಮಠವು ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.
‘ಸೇವಾರತ್ನಪ್ರಶಸ್ತಿ’ಯನ್ನು ಶ್ರೀಮಠವು 2000ನೇ ಸಾಲಿನಿಂದ ಪ್ರದಾನ ಮಾಡುತ್ತಿದ್ದು ಇಲ್ಲಿಯವರೆಗೆ ನಾಡಿನ ವಿವಿಧ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಎಲೆಮರೆಯ ಹೂಗಳನ್ನು ಗುರುತಿಸಿ ಶ್ರೀಮಠವು ಪ್ರಶಸ್ತಿ ಪ್ರದಾನ ಮಾಡಿದೆ.