ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಿ.ಟಿ. ರವಿ 12 ಬಾರಿ ಅವಾಚ್ಯ ಪದ ಬಳಸಿದ್ದಾರೆ

ಬೆಳಗಾವಿ: ಸಿ.ಟಿ.ರವಿ ಅವರು 12 ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿದ್ದಾರೆ. ಇದು ದಾಖಲೆಯಲ್ಲಿದೆ. ಬೇಕಾದರೆ ಮಾಧ್ಯಮಗಳಿಗೆ ನಾನು ದಾಖಲೆ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ”ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಕ್ಕೆ ಪರಿಷತ್ನಲ್ಲಿ ಚರ್ಚೆ ಆಗಿದೆ. ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಿಂದಿಸಿದಾಗ ಬಿಜೆಪಿಯವರ ವಿರುದ್ಧ ಹೋರಾಟ ಮಾಡಬೇಕಾಯಿತು. ಅದೇ ವೇಳೆ ಇವರು ಹೆಣ್ಣುಮಗಳ ಮೇಲೆ ಆಕ್ಷೇಪಾರ್ಹವಾಗಿ ಕರೆದಿದ್ದಾರೆ” ಎಂದು ಆರೋಪಿಸಿದರು.ಭಾಪತಿ ಬಸವರಾಜ ಹೊರಟ್ಟಿ ವಿರುದ್ಧವೂ ಅಸಮಾಧಾನ ಹೊರಹಾಕಿದ ಡಿಕೆಶಿ, ”ಸಭಾಪತಿ ಅವರ ವಿಚಾರ ನನಗೆ ಸರಿ ಅನಿಸಿಲ್ಲ. ಅವರು ಚರ್ಚೆಗೆ ಅವಕಾಶ ಮಾಡಿ ಕೊಡಬೇಕಿತ್ತು. ಏನಾಗಿದೆ ಎಂದು ಪರಿಶೀಲಿಸಬೇಕಿತ್ತು. ಲಕ್ಷ್ಮೀ ಅವರ ತಪ್ಪಿದ್ದರೆ ಅವರಿಗೇ ತಪ್ಪು ಎಂದು ಹೇಳಬೇಕಿತ್ತು. ರವಿ ತಪ್ಪಿದ್ದರೆ ಅವರಿಗೆ ಹೇಳಬೇಕಿತ್ತು. ಹಿರಿಯ ರಾಜಕಾರಣಿಯಾದ ಅವರಿಗೆ ಇದು ಗೊತ್ತಿರಬೇಕಿತ್ತು. ಅವರು ಯಾವುದೇ ಪಕ್ಷದವರಾಗಿರಲಿ. ಆದರೆ, ಅವರ ಹುದ್ದೆ ಪಕ್ಷಾತೀತವಾಗಿ ಇರಬೇಕು” ಎಂದು ಕಿಡಿಕಾರಿದರು.