Uncategorized

ಬೆಳಗಾವಿ ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಮಾಜಿ ಸೈನಿಕನ ನಿಗೂಢ ಸಾವು, ಈಗ ರೋಮಾಂಚಕ ಕೊಲೆ ಪ್ರಕರಣವಾಗಿ ಬದಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಮಾಜಿ ಸೈನಿಕನ ನಿಗೂಢ ಸಾವು, ಈಗ ರೋಮಾಂಚಕ ಕೊಲೆ ಪ್ರಕರಣವಾಗಿ ಬದಲಾಗಿದೆ. ಆಕಸ್ಮಿಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಗುಣಮುಖರಾಗುತ್ತಿದ್ದ ಪತಿಯನ್ನೇ, ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಆಸ್ಪತ್ರೆಯಲ್ಲೇ ವಿಷ ಹಾಕಿ ಕೊಂದಿರುವ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಹುಕ್ಕೇರಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ಸಣ್ಣ ರಸ್ತೆ ಅಪಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಘಟಪ್ರಭಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಂದೀಪ್ ಅವರು ಕ್ರಮೇಣ ಗುಣಮುಖರಾಗುತ್ತಿದ್ದರು. ಆದರೆ, ಇದನ್ನೇ ದಾಳವಾಗಿಸಿಕೊಂಡ ಸಂದೀಪ್ ಪತ್ನಿ ಸುಮಾ, ತನ್ನ ಅನೈತಿಕ ಸಂಬಂಧ ಹೊರಬರಬಾರದು ಮತ್ತು ಗಂಡ ಸತ್ತರೆ ಬರೋಬ್ಬರಿ 2 ಕೋಟಿ ರೂಪಾಯಿ ವಿಮೆ ಹಣ ಸಿಗುತ್ತದೆ ಎಂದು ಆಸೆಗೆ ಬಿದ್ದಿದ್ದಾಳೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಿಯಕರ ಪುಂಡಲೀಕನ ಜೊತೆ ಸೇರಿ, ಆಸ್ಪತ್ರೆಯಲ್ಲಿ ಸಂದೀಪ್‌ಗೆ ನೀಡಲಾಗುತ್ತಿದ್ದ ಸಲೈನ್ ಬಾಟಲಿಗೆ ಕ್ರಿಮಿನಾಶಕ ಔಷಧಿ ಬೆರೆಸಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ತದನಂತರ ಅಪಘಾತದಿಂದಲೇ ಗಂಡ ಸತ್ತಿದ್ದಾನೆ ಎಂದು ಕಥೆ ಕಟ್ಟಿ ನಾಟಕವಾಡಿದ್ದಾಳೆ.
ಸಂದೀಪ್ ಸಾವಿನ ಬೆನ್ನಲ್ಲೇ ಅನುಮಾನಗೊಂಡ ಯಮಕನಮರಡಿ ಸಿಪಿಐ ಜಾವೀದ್ ಮುಶಾಪುರೆ ಅವರ ನೇತೃತ್ವದಲ್ಲಿ ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಈ ಹಸಿ ಹಸಿ ಸುಳ್ಳು ಬಯಲಾಗಿದೆ. ಇದು ಅಪಘಾತದ ಸಾವಲ್ಲ, ಬದಲಿಗೆ ಪತ್ನಿ ಮತ್ತು ಪ್ರಿಯಕರ ಸೇರಿ ಮಾಡಿದ ವ್ಯವಸ್ಥಿತ ಕೊಲೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಪ್ರಕರಣದ ಗಂಭೀರತೆ ಅರಿತು, ಬೆಳಗಾವಿ ಉಪವಿಭಾಗಾಧಿಕಾರಿ (AC) ಶ್ರವಣಕುಮಾರ್ ನಾಯಕ್ ಅವರ ಸಮ್ಮುಖದಲ್ಲಿ ತನಿಖಾ ತಂಡವು ಮೂರು ತಿಂಗಳ ಹಿಂದೆ ಹೂಳಲಾಗಿದ್ದ ಮಾಜಿ ಯೋಧ ಸಂದೀಪ್ ಅವರ ಮೃತದೇಹವನ್ನು ಮತ್ತೊಮ್ಮೆ ಹೊರತೆಗೆದಿದೆ. ಶವದ ಅವಶೇಷಗಳನ್ನು ಮಹಜರು ನಡೆಸಿ, ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದ್ದು, ವರದಿ ಬಂದ ಬಳಿಕ ಕೊಲೆ ಸಂಪೂರ್ಣವಾಗಿ ಸಾಬೀತಾಗಲಿದೆ. ಬೈಟ್ ಎಸಿ
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತರ ಸಹೋದರ ಸಂಜಯ್ ಮಂಜರಗಿ, “ನಾವೆಲ್ಲರೂ ಇದನ್ನು ಅಪಘಾತದ ಸಾವು ಅಂದುಕೊಂಡಿದ್ದೆವು. ಆದರೆ ಸಿಪಿಐ ಜಾವೀದ್ ಮುಶಾಪೂರೆ ನೇತೃತ್ವದ ತಂಡವು ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ್ದರಿಂದಲೇ ಸತ್ಯ ಹೊರಬಂದಿದೆ” ಎಂದು ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ದೇಶ ಕಾಯ್ದ ಸೈನಿಕನಿಗೆ ದ್ರೋಹ ಬಗೆದು ಕೊಂದಿರುವ ಪಾಪಿಗಳಿಗೆ ಕಾನೂನಿನಡಿಯಲ್ಲಿ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button