ಆ್ಯಸಿಡ್ ಮಿಶ್ರಿತ ನೀರು; ಸಚಿವ ಎಂಬಿಪಿ ಕ್ಷೇತ್ರದಲ್ಲೇ ರೈತರಿಗೆ ಸಂಕಷ್ಟ.

ವಿಜಯಪುರ: ಅನ್ನದಾತರಿಗೆ ಅದೇಕೋ ಸಂಕಷ್ಟಗಳು ಒಂದಿಲ್ಲಾ ಒಂದು ರೀತಿಯಿಂದ ವಕ್ಕರಿಸುತ್ತವೆ. ಪ್ರಕೃತಿ ವಿಕೋಪ, ಹುಳು ಭಾಧೆ, ಬೆಳೆ ರೋಗಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಆದ್ರೆ ಈ ಬಾರಿ ರೈತರಿಗೆ ಮಾರಕವಾಗಿ ಪರಿಣಮಿಸಿದ್ದು ಮಾತ್ರ ಆ್ಯಸಿಡ್ ಮಿಶ್ರಿತ ನೀರು. ಅನುಮತಿ ಇಲ್ಲದೆ ಜಮೀನುಗಳಲ್ಲಿ ಲಾರಿ ಮೂಲಕ ಬರುತ್ತಿರುವ ಈ ನೀರು ದ್ರಾಕ್ಷಿ ಬೆಳೆಗೆ ಹಾನಿಕಾರಕವಾಗಿ ಪರಿಣಮಿಸಿ ರೈತರನ್ನು ಆತಂಕಕ್ಕೆ ಸಿಲುಕಿಸಿದೆ.ಈ ಕುರಿತು ಇಲ್ಲಿದೆ ಡಿಟೇಲ್ಸ್…
ದ್ರಾಕ್ಷಿ ಬೆಳೆಗೆ ವಿಜಯಪುರ ಜಿಲ್ಲೆ ಹೆಸರುವಾಸಿ. ಇಲ್ಲಿನ ದ್ರಾಕ್ಷಿ ವಿದೇಶಗಳಿಗೆ ರಫ್ತಾಗುವ ಮಟ್ಟಿಗೆ ಖ್ಯಾತಿ ಹೊಂದಿದೆ. ಇಂತಹ ದ್ರಾಕ್ಷಿ ಬೆಳೆಯುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅದು ಕೂಡಾ ರಾಜ್ಯದ ಪ್ರಭಾವಿ ಸಚಿವರಾದ ಎಂ.ಬಿ.ಪಾಟೀಲರ ಮತಕ್ಷೇತ್ರದಲ್ಲಿ ಅನ್ನೋದೇ ವಿಶೇಷ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಯಕ್ಕುಂಡಿ ಗ್ರಾಮದಲ್ಲಿ ರೈತರು ಬೆಳೆದಿರವ ದ್ರಾಕ್ಷಿ ಗೆ ಈ ಗ್ರಾಮದ ಸುತ್ತಮುತ್ತಲಿನ ಕಾರ್ಖಾನೆಗಳ ಆ್ಯಸಿಡ್ ಮಿಶ್ರಿತ ನೀರನ್ನು ಜಮೀನುಗಳಲ್ಲಿ ತಂದು ಬಿಡುತ್ತಿದ್ದಾರೆ.
ರೈತರ ಅನುಮತಿ ಇಲ್ಲದೆ ಕಾರ್ಖಾನೆಯ ತ್ಯಾಜ್ಯ ನೀರನ್ನು ಹಾಕುತ್ತಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ರೂ ಕೂಡಾ ಲಾರಿ ಚಾಲಕರು ಕ್ಯಾರೆ ಎನ್ನುತ್ತಿಲ್ಲಾ ಎನ್ನುವದು ರೈತರ ಅಳಲು.
ಇನ್ನೂ ಈ ತ್ಯಾಜ್ಯ ದಿಂದ ರೈತರು ಬೆಳೆದ ದ್ರಾಕ್ಷಿ ಬೆಳೆ ಒಣಗುತ್ತಿದ್ದು ಕಾಯಿ ಬೆಳೆದು ಇಳುವರಿ ಕೈಗೆ ಬರುವ ಹೊತ್ತಿನಲ್ಲಿ ಈ ರೀತಿಯಲ್ಲಿ ತ್ಯಾಜ್ಯ ನೀರಿನ ಪರಿಣಾಮವಾಗಿ ಕಾಯಿ ಬಲಿಯುತ್ತಿಲ್ಲಾ. ಯಕ್ಕುಂಡಿ ಗ್ರಾಮದಲ್ಲಿ ಎರಡು ಎಕರೆ ಜಮೀನಿನಲ್ಲಿ ದ್ರಾಕ್ಷಿ ಬೆಳೆದಿರುವ ರೈತ ಚಂದ್ರಶೇಖರ ಕೊಪ್ಪದ ಅವರ ದ್ರಾಕ್ಷಿ ತೋಟದಲ್ಲಿ ಹಾಗೂ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಈ ತ್ಯಾಜ್ಯ ವನ್ನು ಲಾರಿ ಚಾಲಕರು ತಂದು ಸುರಿಯುತ್ತಿದ್ದಾರೆ. ರೈತರು ಎಚ್ಚರಿಕೆ ನೀಡಿ ತಕರಾರು ಎತ್ತಿರುವ ಘಟನೆ ನಡೆದಿದೆ. ಜಮೀನುಗಳ ಪಕ್ಕದ ಖಾಲಿ ಇರುವ ಎತ್ತರ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುತ್ತಿರುವದ್ರಿಂದ ಆ ನೀರು ರೈತರ ಜಮೀನುಗಳಿಗೆ ಸೇರುತ್ತಿದೆ. ತಕ್ಷಣವೇ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಇಲ್ಲಿಯ ರೈತರು ಆಗ್ರಹಿಸುತ್ತಿದ್ದಾರೆ.
ಒಟ್ನಲ್ಲಿ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ರೈತರ ಕುರಿತು ಅಪಾರ ಕಾಳಜಿಯುಳ್ಳ ಸಚಿವ ಎಂ.ಬಿ.ಪಾಟೀಲರು ಹಾಗೂ ಜಿಲ್ಲಾಡಳಿತ ಅದ್ಯಾವ ಕ್ರಮ ತೆಗೆದುಕೊಂಡು ರೈತರ ನೆರವಿಗೆ ಧಾವಿಸುತ್ತದೆ ಎನ್ನುವದನ್ನು ಕಾದು ನೋಡಬೇಕಿದೆ.