ರಾಜಕೀಯರಾಜ್ಯ

ನೋಂದಣಿ ಮಾಡಿಸುವ ವೇಳೆ ಸರ್ಕಾರಕ್ಕೆ ಆಗುತ್ತಿರುವ ವಂಚನೆ ತಡೆಯಲು ಜಿಐಎಸ್ ಆಧಾರಿತ ನೋಂದಣಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ನೋಂದಣಿ ಮಾಡಿಸುವ ವೇಳೆ ಸರ್ಕಾರಕ್ಕೆ ಆಗುತ್ತಿರುವ ವಂಚನೆ ತಡೆಯಲು ಜಿಐಎಸ್ ಆಧಾರಿತ ನೋಂದಣಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸ್ಥಿರಾಸ್ತಿ ದಸ್ತಾವೇಜುಗಳ ರಿಜಿಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ಆಡುತ್ತಿರುವ ಮೋಸಕ್ಕೆ ಕಡಿವಾಣ ಹಾಕಲು ಕಂದಾಯ ಇಲಾಖೆ ಹೊಸ ಪ್ಲಾನ್ ಮಾಡಲು ಮುಂದಾಗಿದೆ.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕುಳಿತು ಸಬ್ ರಿಜಿಸ್ಟ್ರಾರ್‌ಗಳು ಸ್ಥಿರಾಸ್ತಿಯ ಸ್ಥಿತಿಗತಿ ನೋಡುವ ಭೌಗೋಳಿಕ ದತ್ತಾಂಶ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಕಾವೇರಿ 2.0 ತಂತ್ರಾಂಶಕ್ಕೆ ಅಳವಡಿಸಲು ಮುಂದಾಗಿದ್ದು, ಇದರಿಂದ ದಸ್ತಾವೇಜು ನೋಂದಣಿಗೆ ಬರುವ ಸ್ಥಿರಾಸ್ತಿಯನ್ನು ಕೂತಲ್ಲಿಯೇ ಅದರ ಚಕ್​​ಬಂದಿ ಸಮೇತ ನೋಡಬಹುದಾಗಿದೆ.

ಸರ್ಕಾರಕ್ಕೆ ರಾಜಸ್ವ ವಂಚನೆ: ಸಚಿವ ಕೃಷ್ಣಬೈರೇಗೌಡ ಅವರು ಕಂದಾಯ ಇಲಾಖೆಯನ್ನು ವಹಿಸಿಕೊಂಡ ನಂತರ ಈ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತರಲು ಮುಂದಾಗಿದ್ದಾರೆ. ಅದರಲ್ಲಿ ಜಿಐಎಸ್ ತಂತ್ರಾಂಶವೂ ಒಂದು. ಸರ್ಕಾರಕ್ಕೆ ಆಗುತ್ತಿರುವ ರಾಜಸ್ವ ವಂಚನೆ ತಡೆಯಲು ಈ ಹೊಸ ವ್ಯವಸ್ಥೆ ತರಲಾಗುತ್ತಿದೆ. ಸ್ಥಿರಾಸ್ತಿ ನೋಂದಣಿ ವೇಳೆ ನಿಗದಿತ ಜಾಗದಲ್ಲಿ ಕಟ್ಟಡಗಳು ಇದ್ದರೂ ಖಾಲಿ ಜಾಗವೆಂದು ನೋಂದಣಿ ಮಾಡುತ್ತಿದ್ದಾರೆ.

ರಾಷ್ಟ್ರೀಯ, ರಾಜ್ಯ ಅಥವಾ ಜಿಲ್ಲಾ ರಸ್ತೆಗೆ ಹೊಂದಿಕೊಂಡಿದ್ದರೂ ರಸ್ತೆ ಎಂಬಂತೆ ತೋರಿಸಲಾಗುತ್ತದೆ. ಇದರಿಂದ ನೋಂದಣಿ ಶುಲ್ಕ ಕಡಿಮೆಯಾಗುತ್ತದೆ. ಈ ರೀತಿಯಾಗುತ್ತಿರುವ ಸೋರಿಕೆಯನ್ನು ತಪ್ಪಿಸುವ ಉದ್ದೇಶಕ್ಕೆ ಜಿಐಎಸ್‌ ಜಾರಿಗೆ ತರಲಾಗುತ್ತಿದೆ.
ನೋಂದಣಿ ಸಂದರ್ಭದಲ್ಲಿ ನಿರ್ದಿಷ್ಟ ಆಸ್ತಿ ಇರುವ ಪ್ರದೇಶ, ಯಾವ ರಸ್ತೆಗೆ ಹೊಂದಿಕೊಂಡಿದೆ ಎಂಬುದನ್ನು ಲೆಕ್ಕ ಹಾಕಿ, ಅದರ ಪ್ರಕಾರ ಮುದ್ರಾಂಕ ವಸೂಲಿ ಮಾಡಿ ತೆರಿಗೆ ಹೆಚ್ಚಿಸುವ ಗುರಿ ಇಲಾಖೆ ಹಾಕಿಕೊಂಡಿದೆ.

ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿನ ದತ್ತಾಂಶವನ್ನು ಬಳಸಲಾಗುತ್ತದೆ. ಇ – ಆಡಳಿತ, ಕಂದಾಯ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ಜಂಟಿಯಾಗಿ ಜಿಐಎಸ್ ಆಧಾರಿತ ದತ್ತಾಂಶವನ್ನು ಬಳಕೆ ಮಾಡಲಾಗುತ್ತದೆ. ಖಾಲಿ ಜಾಗ ಅಥವಾ ಕಟ್ಟಡ ನಿರ್ಮಾಣ ಮಾಡಲಾಗಿದೆಯೇ, ಆಗಿದ್ದರೆ ಎಷ್ಟು ಮಹಡಿಗಳು ಇವೆ. ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಗೆ ಜಮೀನು ಹೊಂದಿಕೊಂಡಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ರಾಜಸ್ವ ನಿಗದಿ ಮಾಡಲು ಸಬ್ ರಿಜಿಸ್ಟ್ರಾರ್‌ಗಳಿಗೆ ಈ ದತ್ತಾಂಶದಿಂದ ಅನುಕೂಲವಾಗಲಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.

ಪ್ರತಿ 2-3 ವರ್ಷಗಳಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರತಿಯೊಂದು ಆಸ್ತಿಯ ಹತ್ತಿರ ಹೋಗಿ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಆದರೂ, ಕೆಲವೊಂದು ಬಾರಿ ಪರಿಷ್ಕರಣೆಗೊಂಡ ಮೇಲೆ ಸಾಕಷ್ಟು ಅಭಿವೃದ್ಧಿ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಪಕ್ಷಗಾರರು, ಹಳೆಯ ಚಕ್ಕುಬಂಧಿ ಅಥವಾ ಆಸ್ತಿಯ ಸ್ಥಿತಿಗತಿಯನ್ನು ಕೊಟ್ಟು ರಿಜಿಸ್ಟ್ರೇಷನ್ ಮಾಡಿಸುತ್ತಾರೆ. ಇದರಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಾಕಷ್ಟು ನಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಜಿಐಎಸ್ ಯೋಜನೆ ಅಳವಡಿಸಿಕೊಳ್ಳಲಾಗುತ್ತಿದೆ.

ನೋಂದಣಿಯ ವೇಳೆ ಆಸ್ತಿ ಇರುವ ಪ್ರದೇಶ, ಯಾವ ರಸ್ತೆಗೆ ಹೊಂದಿಕೊಂಡಿದೆ ಎಂಬುದನ್ನು ಲೆಕ್ಕ ಹಾಕುವ ಮೂಲಕ ಮುದ್ರಾಂಕ ವಸೂಲಿ ಮಾಡಲು ನೋಂದಣಿ ಇಲಾಖೆ ಮುಂದಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾರಿಗೆ ತರುವ ಉದ್ದೇಶ ಇದೆ. ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಅನುಷ್ಠಾನವಾಗುತ್ತದೆ. ಹಂತ ಹಂತವಾಗಿ ನಗರಕ್ಕೆ ವಿಸ್ತರಣೆ ಮಾಡಲಾಗುತ್ತದೆ. ಗ್ರಾಮಾಂತರ ಭಾಗದಲ್ಲಿ ಆಗುವ ತಪ್ಪು ಸರಿಪಡಿಸಿಕೊಳ್ಳುವ ಮೂಲಕ ನಗರ ಪ್ರದೇಶಕ್ಕೆ ವಿಸ್ತರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಐಎಸ್​ನ ಕಾರ್ಯಚಟುವಟಿಕೆ ಏನು?: ದಸ್ತಾವೇಜು ನೋಂದಣಿ ಆಗುವ ಆಸ್ತಿ ಎಲ್ಲಿದೆ ಎಂಬುದನ್ನು ನೋಡಬಹುದಾಗಿದೆ. ಎಷ್ಟು ಪ್ರದೇಶ ಮಾರಾಟ ಎಂಬುದು ಮತ್ತು ಅಲ್ಲಿನ ಮುದ್ರಾಂಕ ದರ ಆಟೋಮ್ಯಾಟಿಕ್ ಆಗಿ ಲೆಕ್ಕ ಹಾಕಲಾಗುತ್ತದೆ. ಎಷ್ಟು ಪ್ರದೇಶ ಮಾರಾಟ ಎಂಬ ಸಮಗ್ರ ಮಾಹಿತಿ ಸಂಗ್ರಹವಾಗುತ್ತದೆ. ಬಳಿಕ ಸ್ವಯಂ ಚಾಲಿತವಾಗಿ ಮುದ್ರಾಂಕ ದರದ ಲೆಕ್ಕಾಚಾರ, ದರ ಪಾವತಿಸಿ, ದಾಖಲೆಗಳನ್ನು ಸಲ್ಲಿಸಿದ ಬಳಿಕ ನೋಂದಣಿ ಆಗುತ್ತದೆ. ಸರ್ವೇ ನಂಬ‌ರ್ ಅಥವಾ ಪಿಐಡಿ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅದರಲ್ಲಿನ ಭೌಗೋಳಿಕ ಸ್ಥಿತಿಗತಿ ತೋರಿಸಲಿದ್ದು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಲೆಕ್ಕ ಸಿಗಲಿದೆ.

ಪ್ರಾಯೋಗಿಕವಾಗಿ ಜಾರಿಯಾಗುವುದೆಲ್ಲಿ?: ಶೀಘ್ರದಲ್ಲಿಯೇ ಜಿಐಎಸ್ ತಂತ್ರಾಂಶ ಸಿದ್ಧವಾಗಲಿದೆ. ಪ್ರಾಯೋಗಿಕವಾಗಿ ನೆಲಮಂಗಲ, ಹೊಸದುರ್ಗ ತಾಲೂಕುಗಳು ಹಾಗೂ ಕಲಬುರಗಿ ಮತ್ತು ಚಾಮರಾಜನಗರ ಜಿಲ್ಲೆಯ ತಲಾ ಒಂದು ತಾಲೂಕಿನಲ್ಲಿ ಜಾರಿಗೆ ತರಲಾಗುತ್ತದೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಒಟ್ಟಿಗೆ ಅನುಷ್ಠಾನ ಮಾಡಲಾಗುತ್ತದೆ.

“ನೋಂದಣಿ ಮಾಡಿಸುವ ವೇಳೆ ಸರ್ಕಾರಕ್ಕೆ ಆಗುತ್ತಿರುವ ವಂಚನೆ ತಡೆಯಲು ಜಿಐಎಸ್ ಆಧಾರಿತ ನೋಂದಣಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ನೋಂದಣಿ ವೇಳೆ ಸುಳ್ಳು ಹೇಳುವುದಕ್ಕೆ ಬ್ರೇಕ್ ಬೀಳಲಿದೆ. ಅದಷ್ಟು ಶೀಘ್ರವೇ ರಾಜ್ಯಾದ್ಯಂತ ಜಿಐಎಸ್ ಅಳವಡಿಸಲಾಗುವುದು” ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button