
ಕಾಂಗ್ರೆಸ್ ಟಿಕೆಟ್ ಕುರಿತು ಚರ್ಚಿಸಲು ಸಚಿವ ಲಾಡ್ ಭೇಟಿಯಾದ ಸಂಡೂರು ಕಾಂಗ್ರೆಸ್ ಮುಖಂಡರು
ಬೆಂಗಳೂರು, 17 ನವೆಂಬರ್: ವಿಧಾನ ಸಭಾ ಉಪ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲ ಪಕ್ಷಗಳಲ್ಲೂ ಚಟಿವಟಿಕೆಗಳು ಗರಿಗೆದರಿವೆ. ಅದರಂತೆ ಸಂಡೂರು ಕ್ಷೇತ್ರದಲ್ಲೂ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಸಂಡೂರು ಕ್ಷೇತ್ರದ ಶಾಸಕರಾಗಿದ್ದ ಇ ತುಕಾರಾಂ ಅವರು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ಈಗ ಉಪ ಚುನಾವಣೆ ನಡೆಯುತ್ತಿದೆ.
ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ಲಾಡ್ ಅವರ ಬೆಂಗಳೂರಿನ ಅಧಿಕೃತ ನಿವಾಸಕ್ಕೆ ಇಂದು ಸಂಡೂರಿನ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಿದ್ದರು.
ಸುಮಾರು 300- 400 ಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿ ಮುಂಬರುವ ಸಂಡೂರಿನ ವಿಧಾನಸಭಾ ಉಪ ಚುನಾವಣೆಯ ಕುರಿತು ಚರ್ಚಿಸಿದರು.
ಸಂಡೂರಿನ ಚುನಾವಣೆಯ ಕಣದಲ್ಲಿ ಸಚಿವ ಸಂತೋಷ್ ಲಾಡ್ ಅವರ ಪಾತ್ರ ನಿರ್ಣಾಯಕವಾಗಿದ್ದು, ಅವರು ಸೂಚಿಸಿದ ಅಭ್ಯರ್ಥಿಗೆ ನಮ್ಮ ಬೆಂಬಲ ಸದಾ ಇರಲಿದೆ ಎಂದು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಸಾಧ್ಯತೆ ಹೆಚ್ಚಿರುವುದರಿಂದ ಪಕ್ಷದಿಂದ ಸೂಕ್ತ ವ್ಯಕ್ತಿಗೆ ಅವಕಾಶ ನೀಡಿ ಎಂದು ಕಾರ್ಯಕರ್ತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು, “ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡೋಣ. ಅಭ್ಯರ್ಥಿ ಆಯ್ಕೆ ಸಂಬಂಧ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಇ ತುಕಾರಾಂ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಂತೋಷ್ ಲಾಡ್ ಅವರು ಸಾಕಷ್ಟು ಚುಣಾವಣಾ ಸಭೆ ಮತ್ತು ರ್ಯಾಲಿಗಳಲ್ಲಿ ಭಾಗವಹಿಸಿ ಗೆಲುವಿಗಾಗಿ ಶ್ರಮಿಸಿದ್ದರು.