
ಬೆಳಗಾವಿ : “ಗಾಂಧಿ ಭಾರತದ ಅಂಗವಾಗಿ ಜ.21ರಂದು ನಡೆಯಲಿರುವ ಗಾಂಧಿ ಪ್ರತಿಮೆ ಅನಾವರಣ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ತಯಾರಿ ನಡೆಯುತ್ತಿದ್ದು, ಸಚಿವರುಗಳು ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸರ್ಕಿಟ್ ಹೌಸ್, ಕಪಿಲೇಶ್ವರ ದೇವಾಲಯ ಹಾಗೂ ಫಿರೋಜ್ ಸೇಠ್ ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.
“ಜ.21ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇಂದು ಮಧ್ಯಾಹ್ನ ಕಾರ್ಯಕ್ರಮಕ್ಕೆ ಬರುವವರ ವಾಹನ ನಿಲುಗಡೆ ಸ್ಥಳ ಪರಿಶೀಲನೆ ಮಾಡಲಿದ್ದೇನೆ. ಆಹಾರ ಸಮಿತಿ ಜವಾಬ್ದಾರಿ ಹೊತ್ತಿರುವ ಸಚಿವರಾದ ಕೆ.ಹೆಚ್. ಮುನಿಯಪ್ಪ, ವಸತಿ ಸಮಿತಿ ಮುಖ್ಯಸ್ಥರಾದ ಸುಧಾಕರ್ ಅವರು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದು, ಸ್ವಾಗತ ಸಮಿತಿ ಮುಖ್ಯಸ್ಥರಾದ ಪರಮೇಶ್ವರ್ ಅವರು ಶೀಘ್ರದಲ್ಲೇ ಆಗಮಿಸಲಿದ್ದಾರೆ. ನಾವು ಯಾರಿಗೆಲ್ಲ ಜವಾಬ್ದಾರಿ ವಹಿಸಿದ್ದೇವೋ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಜಿಲ್ಲಾ ಸಚಿವರು ಸಂಘಟನೆಯಲ್ಲಿ ತೊಡಗಿದ್ದಾರೆ” ಎಂದು ತಿಳಿಸಿದರು.