ಬಸವಣ್ಣನವರ ತತ್ವಗಳನ್ನು ಅರಿತು ಸಮಾಜದ ಏಳ್ಗೆಗಾಗಿ ದುಡಿಯಿರಿ; ಶಾಸಕ ಆಸೀಫ್ ಸೇಠ್

ಬೆಳಗಾವಿ: ಬಸವಣ್ಣನವರು ಸಂದೇಶ ನೀಡಿದಂತೆ ಎಲ್ಲರೂ ಮಾನವಿಯತೆಯ ಮೌಲ್ಯಗಳನ್ನು ಅರಿತು ಒಂದಾಗಿ ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗಬೇಕೆಂದು ಉತ್ತರ ಶಾಸಕ ಆಸೀಫ್ ಸೇಠ್ ಹೇಳಿದರು.
ಬೆಳಗಾವಿಯ ರಾಷ್ಟ್ರೀಯ ಬಸವ ದಳ ಮತ್ತು ಲಿಂಗಾಯತ ಧರ್ಮ ಮಹಾಸಭೆಯ ವತಿಯಿಂದ 892ನೇ ವಿಶ್ವಗುರು ಬಸವಣ್ಣನ ಜಯಂತ್ಯೋತ್ಸವವನ್ನು ಮಹಾಂತೇಶನಗರದ ವಿಶ್ವಗುರು ಬಸವ ಮಂಪಟದಲ್ಲಿ ಆಯೋಜಿಸಲಾಗಿತ್ತು. ಮಹಾಪೌರ ಮಂಗೇಶ್ ಪವಾರ್ ಅವರು ಧ್ವಜಾರೋಹನ ನೆರವೇರಿಸಿದರು. ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಬೆಂಡಿಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್ ಉಪಸ್ಥಿತರಿದ್ಧರು. ಗೌರವ ಅತಿಥಿಗಳಾಗಿ ಶಂಕರ ಗುಡಸ, ರತ್ನಪ್ರಭಾ ಬೆಲ್ಲದ, ಬಸವರಾಜ ರೊಟ್ಟಿ, ಈರಣ್ಣ ದೇಯಣ್ಣನವರ, ಸೂರ್ಯಕಾಂತ ಭಾಂವಿ, ಎಂ.ಎಂ.ಗಡಗಲಿ, ಎಸ್.ಎಸ್. ಪಾಟೀಲ್. ಮಲ್ಲಿಕಾರ್ಜುನ ಬಾಬಾನಗರ, ಆನಂದ ಗುಡಸ ಇನ್ನುಳಿದವರು ಉಪಸ್ಥಿತರಿದ್ಧರು.
ಈ ವೇಳೆ ಮಾತನಾಡಿದ ಶಾಸಕ ಆಸೀಫ್ ಸೇಠ್ ಅವರು ಬಸವಣ್ಣನವರು ಸಂದೇಶ ನೀಡಿದಂತೆ ಎಲ್ಲರೂ ಮಾನವಿಯತೆಯ ಮೌಲ್ಯಗಳನ್ನು ಅರಿತು ಒಂದಾಗಿ ಸಮಾಜವನ್ನು ಮುಂದೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು. ಅಲ್ಲದೇ ಉತ್ತರ ಕ್ಷೇತ್ರದಲ್ಲಿಯೂ ಜಗಜ್ಯೋತಿ ಬಸವೇಶ್ವರರ ತತ್ವಾದರ್ಶಗಳನ್ನು ತಿಳಿಸಲು ಉದ್ಯಾನವನ್ನು ನಿರ್ಮಿಸಿ ಬಸವಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದರು.
ವೀರಶೈವ ಲಿಂಗಾಯಿತ ಮಹಾಸಭೆಯ ಅಧ್ಯಕ್ಷೆಯಾದ ರತ್ನಾ ಬೆಲ್ಲದ ಅವರು ಬಸವಣ್ಣನವರ ಜಯಂತಿಯಂದು ಮಾತ್ರ ಉತ್ಸಾಹಿತರಾಗಿರದೇ, ಸದಾ ಉತ್ಸಾಹದಿಂದ ಇದ್ದು, ಸಮಾಜ ಸೇವೆಯನ್ನು ಮಾಡಬೇಕು. ಇಂದು ಸಂಪೂರ್ಣ ಜಗತ್ತಿನಲ್ಲಿ ಬಸವಣ್ಣನವರನ್ನು ಗುರುತಿಸಲಾಗಿದೆ. ಹೀಗಿರುವಾಗ ಬೆಳಗಾವಿಯಲ್ಲಿ ಈ ಬಾರಿ ಅದ್ಧೂರಿಯಾಗಿ ಬಸವ ಜಯಂತಿಯನ್ನು ಆಚರಿಸಬೇಕು. ಈ ಬಾರಿ ಬಸವಪರ ಸಂಘಟನೆಗಳು ಒಂದುಗೂಡಿ ಬಸವ ಜಯಂತಿಯನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಈ ಬಾರಿ ಹಬ್ಬದಂತೆ ಬಸವ ಜಯಂತಿಯನ್ನು ಆಚರಿಸಲು ಕರೆ ನೀಡಿದರು.
ಲಿಂಗಾಯಿತ ಮುಖಂಡರಾದ ಶಂಕರ ಗುಡಸ ಬೆಳಗಾವಿಯಲ್ಲಿ ಲಿಂಗಾಯತ ಮಹಾಸಭೆಯೂ ನಡೆದು ಬಂದ ಹಾದಿಯನ್ನು ತಿಳಿಸಿದ ಅವರು, ಬಸವಣ್ಣನವರ ಕಾರ್ಯಕ್ಕೆ ಸದಾ ತಾವು ಸಿದ್ಧರಾಗಿರುವುದಾಗಿ ತಿಳಿಸಿದರು. ಬಸವ ಜಯಂತಿ ಮೆರವಣಿಗೆಯನ್ನು ಬೃಹತ್ ಮತ್ತು ವಿಜೃಂಭಣೆಯಿಂದ ನೆರವೇರಿಸಲು, ಎಲ್ಲರೂ ಪರಿಶ್ರಮಪಡಬೇಕೆಂದರು.
ಇನ್ನು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಆನಂದ ಗುಡಸ ಅವರು ಸಮಾಜಕ್ಕಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಶವ ವಾಹಕವನ್ನು ಸಿದ್ಧಪಡಿಸಲಾಗುತ್ತಿದೆ. ಒಳಗೆ ಎಸಿ. ಗ್ಲಾಸ್ ಬಾಡಿ ಮತ್ತು ಲಿಂಗೈಕ್ಯರಾದವರ ಫೋಟೊ ಹೊರ ಕಾಣುವಂತಹ ವ್ಯವಸ್ಥೆ ಇರುವುದಾಗಿ ತಿಳಿಸಿದರು.
ನಂತರ ನಗರಸೇವಕ ರಾಜಶೇಖರ್ ಢೋಣಿ ಅವರನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಲಿಂಗಾಯಿತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.