ಮತ್ತೆ ಹೆಚ್ಚಾಗಲಿದೆ ಮದ್ಯದ ದರ

ಬೆಂಗಳೂರು, (ಮಾರ್ಚ್ 11): ಕರ್ನಾಟಕದಲ್ಲಿ ಮತ್ತೆ ಐಎಂಎಲ್ ಮೇಲಿನ ದರ ಹೆಚ್ಚಳವಾಗಲಿದ್ಯಂತೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಎಣ್ಣೆ ದರ ಹೆಚ್ಚಳ ಮಾಡುವ ಬಗ್ಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಕಾರಣ 2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ 38 ಸಾವಿರದ 500 ಕೋಟಿ ರೂಪಾಯಿ ಟಾರ್ಗೆಟ್ ನೀಡಲಾಗಿತ್ತು. ಕಳೆದ ಬಾರಿಯ ಈ ಟಾರ್ಗೆಟ್‌ನಲ್ಲಿ 36 ಸಾವಿರದ 500 ಕೋಟಿ ರೂಪಾಯಿ ಸಂಗ್ರಹವಾಗಿದೆ. ಆದ್ರೆ, ಈ ಬಾರಿಯ 2025ನೇ ಸಾಲಿನ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಅಂದರೆ ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರುಪಾಯಿ ಟಾರ್ಗೆಟ್ ನೀಡಿದ್ದು, ಹೊಸ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಪ್ಲಾನ್ ಮಾಡಿದೆ.
ಕಳೆದ ಬಾರಿಗಿಂತ ಈ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಇಲಾಖೆಗೆ ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆಯ ಗುರಿ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಮದ್ಯದರ ಏರಿಕೆಯ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಿದ್ರೆ ಪ್ರತಿಭಟನೆಗಳು ನಡೆಯಬಹುದು ಎಂದು ಅರಿತ ಸರ್ಕಾರ ಯಾವುದೇ ಏರಿಕೆ ಮಾಡಿಲ್ಲ. ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿದರೆ ಮಧ್ಯದಲ್ಲಿ ಯಾವಾಗಾದರೂ ಎಣ್ಣೆ ಬೆಲೆ ಏರಿಕೆ ಮಾಡಬಹುದು ಎನ್ನುವುದು ಸರ್ಕಾರದ ಪ್ಲ್ಯಾನ್. ಅದರಂತೆ ಇದೀಗ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಅಬಕಾರಿ ಇಲಾಖೆ ಮದ್ಯದ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ.