
ಬೆಂಗಳೂರು, (ಮಾರ್ಚ್ 11): ದಾಖಲೆಯ ಮಟ್ಟದಲ್ಲಿ ಹದಿನಾರನೇ ಬಾರಿಗೆ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ನಿನ್ನೆ(ಮಾರ್ಚ್ 10) ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದಾರೆ. ಬಜೆಟ್ ವಿಷಯದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ತಯಾರಿ ಮಾಡಬೇಕಿದ್ದ ಶಾಸಕಾಂಗ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ನಡುವೆ ಪರಸ್ಪರ ಆರೋಪ ಪ್ರತ್ಯಾರೋಪಗಳ ದೊಡ್ಡ ಸಮರವೇ ನಡೆದು ಹೋಗಿದೆ. ಹೌದು… ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರ ನಡೆಗೆ ಶಾಸಕರಿಂದ ತೀವ್ರ ಅಸಮಾಧಾನ
ನಿನ್ನೆ(ಮಾರ್ಚ್ 10) ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರು ಕೈಗೆ ಸಿಗುತ್ತಿಲ್ಲವೆಂದು ಶಾಸಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯಾಗಿ ಎರಡು ವರ್ಷಗಳಾಗಿವೆ, ಇನ್ನೂ ಶಾಸಕರಿಗೆ ಸಚಿವರು ಸಿಗುತ್ತಲೇ ಇಲ್ಲ, ಭೇಟಿಗೆ ಯತ್ನಿಸಿದರೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರಗಳ ಕೆಲಸಗಳ ನಿಮಿತ್ತ ಸಚಿವರ ಸಂಪರ್ಕಕ್ಕೆ ಯತ್ನಿಸಿದರೂ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ಕೆಲಸಗಳನ್ನ ಮಾಡಿಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಲ್ಲವೇ ಇಲ್ಲಸಲ್ಲದ ಕಾರಣಗಳನ್ನ ನೀಡಿ ನಮ್ಮನ್ನ ಸಾಗ ಹಾಕಲು ನೋಡುತ್ತಾರೆ. ಇದು ಹೀಗೆ ಆದರೆ ಸಚಿವರಾಗಿ ಯಾಕೆ ಇರಬೇಕು? ಸ್ಪಂದಿಸದ ಸಚಿವರನ್ನ ಮುಂದುವರೆಸುವ ಅಗತ್ಯ ಏನಿದೆ? ಮೊದಲು ತಮ್ಮ ನಡೆ ಬದಲಾಯಿಸಿಕೊಳ್ಳದ ಸಚಿವರನ್ನ ಸಂಪುಟದಿಂದ ಕೈಬಿಡಿ ಎಂಬ ಒತ್ತಾಯ ಕೇಳಿ ಬಂದಿದೆ.