ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದವರಿ 23 ಜನರ ವಿರುದ್ಧ ಆರೋಪ ಸಾಬೀತು

ಗದಗ, ಮಾರ್ಚ್ 11: ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ (Laxmeshwar Police Station) ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನ ಆರೋಪಿಗಳು ದೋಷಿ ಎಂದು ಗದಗ (Gadag) ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ರವಿ ಹತ್ತಾಳ, ಮಲ್ಲಪ್ಪ ಹತ್ತಾಳ, ಬಸವರಾಜ್ ಕೊರವನ್ನವರ್, ಮಹಾಂತೇಶ ಹೊಳಲಾಪುರ, ರಾಜು ಹೊಳಲಾಪುರ ಮತ್ತು ಬೀರಪ್ಪ ಬಳ್ಳಾರಿ ಸೇರಿದಂತೆ 23 ಜನರು ದೋಷಿ ಎಂದು ತೀರ್ಪು ನೀಡಿದ್ದು, ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣ
8 ವರ್ಷಗಳ ಅಂದರೆ 2017ರಲ್ಲಿ ಅಕ್ರಮ ಮರಳು ಸಾಗಿಸುವ ವಾಹನ ತಡೆದು ಚಾಲಕನನ್ನು ಪೋಲಿಸರು ಥಳಿಸಿದ್ದರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಟ್ಟೂರು ಗ್ರಾಮದ ಚಾಲಕ ಶಿವಪ್ಪ ಡೋಣಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು. ಸುದ್ದಿ ತಿಳಿಯುತ್ತಿದ್ದಂತೆ ಆತನ ಕುಟುಂಬಸ್ಥರು ಆಸ್ಪತ್ರೆಯಿಂದ ಶವವನ್ನು ತಂದು ಪೊಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಕಾವು ಹೆಚ್ಚಾಗಿ, ರೊಚ್ಚಿಗೆದ್ದ ಜನರು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಗಲಾಟೆ ವೇಳೆ ಪೊಲೀಸ್ ಠಾಣೆಯಲ್ಲಿದ್ದ ಪೀಠೋಪಕರಗಳು, ಪೊಲೀಸ್ ಜೀಪ್, ಹತ್ತಾರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣ ನಡೆದ ನಂತರ ಗೃಹ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು.