ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ ಜಂಟಿಯಾಗಿ ಸ್ಥಾಪಿಸಲ್ಪಟ್ಟಿರುವ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್

ಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ ಜಂಟಿಯಾಗಿ ಸ್ಥಾಪಿಸಲ್ಪಟ್ಟಿರುವ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟರ್ (CCITR) ವತಿಯಿಂದ ಒಂದು ದಿನದ ಸೈಬರ್ ಅಪರಾಧ ತನಿಖಾ ಶೃಂಗಸಭೆ (ಸಿಐಡಿ ಡಿಕೋಡ್-2025)ನ್ನ ಇಂದು ಆಯೋಜಿಸಲಾಗಿತ್ತು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಹೆಚ್ಚುತ್ತಿರುವ ಹೊಸ ಸೈಬರ್ ಅಪರಾಧಗಳು, ಜ್ಞಾನದ ಹಂಚಿಕೆ, ಕೌಶಲ್ಯಾಭಿವೃದ್ಧಿ ಹಾಗೂ ಸಹಯೋಗದ ಮೂಲಕ ಪರಿಹರಿಸುವ ಸಲುವಾಗಿ ರಾಜ್ಯದ 150ಕ್ಕೂ ಅಧಿಕ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ರಾಜ್ಯಗಳ ಮತ್ತು ಕೇಂದ್ರದ 55 ಉನ್ನತ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಗೃಹ ಸಚಿವ ಡಾ. ಜಿ ಪರಮೇಶ್ವರ್ ಶೃಂಗಸಭೆಯನ್ನು ಉದ್ಘಾಟಿಸಿದರು.
ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇತ್ತೀಚಿನ ಸಾಧನಗಳು, ತಂತ್ರಜ್ಞಾನಗಳನ್ನೊಳಗೊಂಡ “ಸೈಬರ್ ಅಪರಾಧ ತನಿಖಾ ಮ್ಯಾನುಯಲ್’ನ 4ನೇ ಆವೃತ್ತಿಯನ್ನ ಇದೇ ಸಂದರ್ಭದಲ್ಲಿ ಗೃಹ ಸಚಿವರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು , ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು. ಸೈಬರ್ ಅಪರಾಧಗಳಿಗೆ ಯಾವುದೇ ರೀತಿಯ ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ 46 ಸಾವಿರಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.