Uncategorized
ಬಂಟ್ವಾಳ: ವಿದ್ಯಾರ್ಥಿನಿಗೆ ಚೂರಿ ಇರಿತ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿ ಸಮೀಪದ ಮೋಂತಿಮಾರು ಪಡ್ಡು ಎಂಬಲ್ಲಿ ಕಾಲೇಜಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ವ್ಯಕ್ತಿಯೋರ್ವ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ವಿದ್ಯಾರ್ಥಿನಿಗೆ ಚೂರಿಯಿಂದ ಇರಿದ ಆರೋಪಿ ಮೋಂತಿಮಾರು ಪಡ್ಡು ನಿವಾಸಿ ಜವ್ವಾರ್(28) ಎಂದು ತಿಳಿದುಬಂದಿದೆ.
ಆತ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿ ಬಸ್ಸಿಗಾಗಿ ಬಸ್ ತಂಗುದಾಣದಲ್ಲಿ ಕಾಯುತ್ತಿದ್ದ ವೇಳೆ ಆರೋಪಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇತರ ಪ್ರಯಾಣಿಕರು ಜೋರಾಗಿ ಕಿರುಚಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಆರೋಪಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.



