ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದ ಸಿಎಂ, ಡಿಸಿಎಂ
ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದ ಸಿಎಂ, ಡಿಸಿಎಂ

ಬೆಂಗಳೂರು: ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೇ ನಿರ್ಮಾಣವಾಗಿದ್ದ ಬಡಾವಣೆಗಳಲ್ಲಿನ ನಿವೇಶನಗಳಿಗೆ 11ಬಿ ಖಾತೆ ಪಡೆಯಲು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ನಿವೇಶನದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಆಸ್ತಿ ಮಾಲೀಕರು 11ಬಿ ಖಾತೆ ಪಡೆಯುವುದಕ್ಕಾಗಿ ಇ-ಸ್ವತ್ತು ತಂತ್ರಾಂಶಕ್ಕೆ ಇಂದು(ಸೋಮವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ-ಸ್ವತ್ತು ಪಡೆಯಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವಕಾಶ ಕಲ್ಪಿಸಿದೆ. ಗ್ರಾಮ ಪಂಚಾಯತ್ಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಸಲುವಾಗಿ ಸರ್ಕಾರದ ವತಿಯಿಂದ ಗ್ರಾಮ ಪಂಚಾಯತ್ ಆಸ್ತಿಗಳನ್ನು ಇ-ಸ್ವತ್ತು 2.O ತಂತ್ರಾಂಶ ವ್ಯಾಪ್ತಿಗೆ ತರಲಾಗಿದೆ. ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ವಾಸಿಸುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದು ಗ್ರಾಮ ಪಂಚಾಯತ್ಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಸರ್ಕಾರ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು 07.04.2025ರಂದು ಅಧಿಸೂಚಿಸಲಾಗಿತ್ತು.
ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸ್ಥಳೀಯ ಯೋಜನಾ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಂದಾಯ ಜಮೀನುಗಳಲ್ಲಿ ನಿರ್ಮಾಣವಾಗಿದ್ದ ಲೇಔಟ್‌ಗಳಲ್ಲಿನ ನಿವೇಶನಗಳ ನೋಂದಣಿ, ಮಾರಾಟ ಮಾಡುವುದನ್ನು ರಾಜ್ಯ ಸರ್ಕಾರ ಒಂದು ವರ್ಷದಿಂದ ರದ್ದು ಮಾಡಿತ್ತು. ಇದರಿಂದ ಗ್ರಾಮೀಣ ಭಾಗದಲ್ಲಿ ನಿವೇಶನಗಳ ಮಾರಾಟ, ನೋಂದಣಿಯಾಗದೆ, ಮಧ್ಯಮವರ್ಗದವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಅಲ್ಲದೆ, ಮಧ್ಯಮ ವರ್ಗದವರು ಒಂದು ಸ್ವಂತ ನಿವೇಶನ ಹೊಂದುವ ಬಹುದಿನಗಳ ಕನಸು ಕನಸಾಗಿಯೇ ಉಳಿದಿತ್ತು.
ಇ-ಸ್ವತ್ತು ತಂತ್ರಾಂಶ ಮೂಲಕ 96 ಲಕ್ಷ ಆಸ್ತಿಗಳಿಗೆ ಇ-ಖಾತೆ: ಅಕ್ರಮ ಕಾರಣಕ್ಕಾಗಿ 2024ರಲ್ಲಿ ಪಂಚಾಯತ್ಗಳು 11ಬಿ ಖಾತೆ ನೀಡುವುದು ಹಾಗೂ ನಿವೇಶನ ನೋಂದಣಿಯನ್ನು ರದ್ದುಗೊಳಿಸಲಾಗಿತ್ತು. ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದರು. ಇದೀಗ ಮತ್ತೆ ನೋಂದಣಿಗೆ ಚಾಲನೆ ದೊರೆಯಲಿದೆ. ಆ ಮೂಲಕ ಗ್ರಾಮ ಪಂಚಾಯತ್ಗಳಲ್ಲಿ ರದ್ದುಗೊಂಡಿದ್ದ 11ಬಿ ಖಾತೆ ವಿತರಣೆ ಹಾಗೂ ನಿವೇಶನ ನೋಂದಣಿ ಡಿ.1ರಿಂದ ಪುನಾರಂಭವಾಗಿದೆ. ಇನ್ಮುಂದೆ ಪಂಚಾಯತ್ಗಳಲ್ಲಿ 11ಬಿ ಖಾತೆ ಪಡೆಯಬಹುದಾಗಿದೆ.
15 ದಿನಗಳಲ್ಲಿ ಇ-ಖಾತಾ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮ 2025ನ್ನು ರೂಪಿಸಲಾಗಿದೆ. ಈ ನಿಯಮ 17.10.2025ರ ಅಕ್ಟೋಬರ್ 17ರಿಂದ ಜಾರಿಗೊಂಡಿವೆ. ಇ-ಸ್ವತ್ತು ತಂತ್ರಾಂಶ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸುಮಾರು 96 ಲಕ್ಷಕ್ಕೂ ಅಧಿಕ ಭೂ ಆಸ್ತಿಗಳಿಗೆ ಇ-ಖಾತೆ ನೀಡಿ ಸಕ್ರಮಗೊಳಿಸುವ ಉದ್ದೇಶ ಹೊಂದಲಾಗಿದೆ. ಈ ಸಕ್ರಮ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಂಚತಂತ್ರ ಸಾಫ್ಟ್ವೇರ್ನ್ನು ಅಪ್ಗ್ರೇಡ್ ಮಾಡಿದ್ದು, ಇದೀಗ ಸುಧಾರಿತ ಇ-ಸ್ವತ್ತು 2.O ತಂತ್ರಾಂಶಕ್ಕೆ ಚಾಲನೆ ನೀಡಿದೆ. ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಇ-ಖಾತಾ ವಿತರಿಸಲಾಗುವುದು.
ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಭೂ ದಾಖಲೆಗಳ ಡಿಜಿಟಲೀಕರಣ, ದಾಖಲೆಗಳ ಸಕ್ರಮೀಕರಣ, ಭೂ ಮಾಲೀಕತ್ವದ ಪರಿಶೀಲನೆ ಸರಳೀಕರಣ ಕಲ್ಪಿಸುವ ಇ-ಸ್ವತ್ತು ವೇದಿಕೆ ಮೂಲಕ ಮೊದಲ ಹಂತವಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಹೊರವಲಯದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸುಮಾರು 7 ಲಕ್ಷ ಭೂ ಆಸ್ತಿಗಳನ್ನು ಸಕ್ರಮಗೊಳಿಸುವ ಗುರಿ ಹೊಂದಲಾಗಿದೆ.
ನೂತನ ನಿಯಮಗಳ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿಯನ್ನು ನೀಡಲಾಗಿದೆ. ನಿಯಮಗಳ ಜಾರಿಗೆ ಪೂರಕವಾಗಿ ಪಂಚತಂತ್ರ ತಂತ್ರಾಂಶದಲ್ಲಿಯೂ ಅಗತ್ಯ ಮಾರ್ಪಾಡು ಮಾಡಲಾಗಿದ್ದು, ಇಂದು ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ: ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲಾ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ-ಸ್ವತ್ತು ಸಹಾಯವಾಣಿ ಕೇಂದ್ರ (ಸಂಖ್ಯೆ: 9483476000) ಸ್ಥಾಪಿಸಲಾಗಿದೆ. ಸುಮಾರು 30ಕ್ಕೂ ಅಧಿಕ ಪಿಡಿಒ ಅಧಿಕಾರಿಗಳು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇ-ಸ್ವತ್ತು ಪೋರ್ಟಲ್ನಲ್ಲಿ ಇ-ಖಾತಾ ಸೃಷ್ಟಿಸಲು ಕಾಲ್ ಸೆಂಟರ್ ಸಿಬ್ಬಂದಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನೆರವಾಗಲಿದ್ದಾರೆ. ಸಾರ್ವಜನಿಕರ ಅಹವಾಲು, ಅನುಮಾನಗಳನ್ನು ಆಲಿಸಿ ಸಲಹೆ ಸೂಚನೆಗಳನ್ನು ಈ ಸಹಾಯವಾಣಿ ಮೂಲಕ ನೀಡಲಾಗುತ್ತದೆ.
ಇ-ಸ್ವತ್ತು (eswathu.karnataka.gov.in) ತಂತ್ರಾಂಶದ ಹೊಸ ಅವತರಣಿಕೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹೊಸ ವ್ಯವಸ್ಥೆಯ ಆರಂಭಿಕ ದಿನಗಳಲ್ಲಿ, ಇ-ಸ್ವತ್ತು ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಹಾಗೂ ಇ-ಸ್ವತ್ತು ಪ್ರಮಾಣಪತ್ರಗಳು (ನಮೂನೆ–11ಎ ಮತ್ತು ನಮೂನೆ–11ಬಿ) ಪಡೆಯುವಾಗ ಕೆಲವು ತಾಂತ್ರಿಕ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಇ-ಸ್ವತ್ತು ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲಾ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇಲಾಖೆಯಿಂದ ಇ-ಸ್ವತ್ತು ಸಹಾಯವಾಣಿ (ಸಂಖ್ಯೆ: 9483476000) ಸ್ಥಾಪಿಸಲಾಗಿದೆ.
ಈಗ ಚಾಲನೆಗೆ ಬರುತ್ತಿರುವ ಇ-ಸ್ವತ್ತು 2.0 ತಂತ್ರಾಂಶದಲ್ಲಿ 11ಬಿ ಖಾತೆ ಪಡೆಯಲು 7-4-2025ರ ದಿನಾಂಕದಿಂದ ಹಿಂದೆ ನಿವೇಶನ ನೋಂದಣಿಯಾಗಿದ್ದರೆ, ಅಥವಾ ಮನೆ ನಿರ್ಮಿಸಿದ್ದರೆ (ವಿದ್ಯುತ್ ಸಂಪರ್ಕ ಪಡೆದಿರಬೇಕು) ಮಾತ್ರ ಇ-ಸ್ವತ್ತು ತಂತ್ರಾಂಶದ ಮೂಲಕ 11ಬಿ ಖಾತೆ ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.


