
ಬೆಳಗಾವಿ: ಇಂದಿನಿಂದ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಾಗಿದೆ, ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಮೆಕ್ಕೆಜೋಳ ಬೆಳೆದ ರೈತರ ಗೋಳು ಕೇಳುವವರಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದ ಮುಂದೆ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ದಲ್ಲಾಳಿಗಳಿಗೆ ರೈತರು ಅತಿ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹತ್ತಿ, ತೊಗರಿ ಸೇರಿದಂತೆ ಹಲವು ಬೆಳೆಗಳ ದರ ಕುಸಿತಕ್ಕೆ ಒಳಗಾಗಿದೆ. ಆದರೂ ಈ ಸರ್ಕಾರ ರೈತರ ಏಳಿಗೆಗಾಗಿ ಶ್ರಮಿಸುತ್ತಿಲ್ಲ ಎಂದು ಹರಿಹಾಯ್ದರು.ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಸಿಎಂ ನುಡಿದಂತೆ ನಮ್ಮ ಸರ್ಕಾರ ಎಂದು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ನುಡಿದಂತೆ ಯಾವುದೇ ಕಾರ್ಯಗಳು ಆಗುತ್ತಿಲ್ಲ. ಹಲವು ಇಲಾಖೆಯಲ್ಲಿ ಉದ್ಯೋಗ ಭರ್ತಿಗಳು ಆಗುತ್ತಿಲ್ಲ. ಸಿಎಂ ಕುರ್ಚಿ ಕಚ್ಚಾಟದಿಂದ ರಾಜ್ಯದಲ್ಲಿ ಕರಿ ನೆರಳು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

