ಬೆಳಗಾವಿ ವಿಭಜನೆ ಬಗ್ಗೆ ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ವಿಭಜನೆ ಬಗ್ಗೆ ಸಭೆ ಕರೆಯುವುದಾಗಿ ಸಿಎಂ ತಿಳಿಸಿದ್ದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ: ಬೆಳಗಾವಿಯನ್ನು ವಿಭಜಿಸುವ ಕುರಿತು ಸದನದ ಸಮಯದಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡುತ್ತಾ, ನೂತನ ಜಿಲ್ಲಾ ರಚನೆ ಬಗ್ಗೆ ಸಿಎಂ ಸಭೆ ಕರೆಯುವುದಾಗಿ ಹೇಳಿದ್ದಾರೆ. ಇದೇ ಅಧಿವೇಶನದ ವೇಳೆಯೇ ಸಭೆ ನಡೆಸಿ ಶಾಸಕರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ ಎಂದು ಜಾರಕಿಹೊಳಿ ಮಾಹಿತಿ ನೀಡಿದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಚರ್ಚೆ ಆಗ್ತಿಲ್ಲ ಎಂಬ ವಿಪಕ್ಷಗಳ ಟೀಕಿಗೆ, ಅಧಿವೇಶನದಲ್ಲಿ ನಡೆಯುತ್ತಿದ್ದು, ಚರ್ಚೆ ಹೇಗೆ ಆಗುತ್ತೆ ಅನ್ನೋದನ್ನು ನೋಡೋಣ. ಸರಿಯಾದ ದಿಕ್ಕಿನಲ್ಲಿ ಹೋದರೆ ಸರಿಯಾಗುತ್ತೆ ಎಂದರು.
ಸರ್ಕಾರದಲ್ಲಿ ನಾಯಕತ್ವ ಗೊಂದಲದ ವಿಚಾರಕ್ಕೆ, ಬಿಜೆಪಿಯವರು ಹೇಳುತ್ತಲೇ ಇದ್ದಾರೆ. ಮೂರು, ಆರು ತಿಂಗಳು ಅಂತ ಮಾತನಾಡುತ್ತಿದ್ದಾರೆ. ಆದರೆ, ಸರ್ಕಾರ ಸುಭದ್ರವಾಗಿ ನಡೆಯುತ್ತಿದೆ. ನಮ್ಮ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ ಎಂದು ಹೇಳಿದರು.
ಅಹಿಂದ ನಾಯಕತ್ವದ ಸಾರಥ್ಯ ವಿಚಾರವಾಗಿ ಮಾತನಾಡುತ್ತಾ, ಅವಕಾಶ ಸಿಕ್ಕಾಗ ನೋಡೋಣ, ಅದರ ಭಾಗವಾಗಿ ಕೆಲಸ ಮಾಡ್ತಿದ್ದೇವೆ ಎಂದರು.
ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತ ಪ್ರಶ್ನೆಗೆ, ಅದರ ಪರಿಣಾಮ ಶೂನ್ಯ, ಈ ರೀತಿ ಬಹಳಷ್ಟು ಬಾರಿ ಮಾಡಿದ್ದಾರೆ. ಎಷ್ಟು ಬಾರಿ ಮಾಡಿದ್ರೂ ಫಲಿತಾಂಶ ಶೂನ್ಯ ಎಂದು ತಿಳಿಸಿದರು.
ಆರಂಭದಲ್ಲೇ ಉತ್ತರ ಕರ್ನಾಟಕ ಭಾಗದ ಚರ್ಚೆ ಮಾಡುವಂತೆ ಬಿಜೆಪಿ ಆಗ್ರಹದ ವಿಚಾರವಾಗಿ ಮಾತನಾಡಿ, ಆದ್ರೆ ಒಳ್ಳೆಯದು, ಸ್ಪೀಕರ್ ನಿಯಮಾವಳಿ ಪ್ರಕಾರ ಮಾಡ್ತಾರೆ. ನಾವೂ ಕೂಡ ಒತ್ತಡ ಹಾಕುತ್ತೇವೆ ಎಂದರು.


