
ಬೆಂಗಳೂರು/ಬೆಳಗಾವಿ: ಭ್ರಷ್ಟಾಚಾರ ಆಗಿದೆ ಅಂತ ಸಾಬೀತು ಮಾಡಿದರೆ ಒಂದು ನಿಮಿಷವೂ ಸಭಾಪತಿ ಸ್ಥಾನದಲ್ಲಿ ಇರುವುದಿಲ್ಲ. ನಾನು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮಾತನಾಡಿದ ವ್ಯಕ್ತಿ ಸಾಕ್ಷಿ ಕೊಟ್ಟಿಲ್ಲ ಅಂದರೆ ಅವನು ಹೇಡಿ ಅಂತಾಗುತ್ತದೆ. ಸದಸ್ಯನಾದವ ಸದನದ ಬಗ್ಗೆ ಮಾತನಾಡಲು ಬರುವುದಿಲ್ಲ. ಆದರೆ, ಅವರೇಕೆ ಆರೋಪ ಮಾಡಿದ್ದಾರೆ ಅಂತ ಗೊತ್ತಿಲ್ಲ. ಹೊರಟ್ಟಿ ಪಕ್ಷಪಾತ ಮಾಡಿದ್ದಾರೆಂದು ಯಾರಾದರು ಹೇಳಲಿ. ಅವರು ಹೇಳಿದ್ದು ಮಾಡುತ್ತೇನೆ. ನಾನು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಯಾರೂ ಇಲ್ಲಿಯವರೆಗೆ ಆರೋಪ ಮಾಡಿಲ್ಲ. ಈ ವ್ಯಕ್ತಿ ಮಾತ್ರ ಆರೋಪ ಮಾಡಿದ್ದಾರೆ ಎಂದರು.
ಸಾಕ್ಷಿ ಇದ್ದರೆ ಕೊಡಲಿ, ಸುಮ್ಮನೆ ಆರೋಪ ಬೇಡ: ವಿಧಾನ ಪರಿಷತ್ ಸಚಿವಾಲಯದ ನೇಮಕಾತಿಯಲ್ಲಿ ಅಕ್ರಮ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಇಎ ವತಿಯಿಂದಲೇ ನೇಮಕಾತಿ ಮಾಡಲಾಗಿದೆ. ಕೆಇಎ ಕೊಟ್ಟ ಪಟ್ಟಿ ಪ್ರಕಾರ ಅಭ್ಯರ್ಥಿಗಳ ಆಯ್ಕೆಯ ಪಟ್ಟಿಯನ್ನು ಪ್ರಕಟಿಸಿದ್ದೇವೆ. ಕೆಇಎ ಮುಖಾಂತರ ಎಲ್ಲವನ್ನೂ ಮಾಡಲಾಗಿದೆ. ನಾವು ಯಾವುದೇ ಮಧ್ಯಪ್ರವೇಶ ಮಾಡಿಲ್ಲ. ಸಾಕ್ಷಿ ಇದ್ದರೆ ಕೊಡಲಿ. ಸುಮ್ಮನೆ ಆರೋಪ ಮಾಡಬಾರದು. ಯಾರ ಮೇಲಾದರೂ ಆರೋಪ ಮಾಡುವ ಮುನ್ನ ವಿಚಾರ ಮಾಡಬೇಕು. ನೇಮಕಾತಿ ಆಗಿ ಒಂದು ತಿಂಗಳಾಗಿದೆ. ಈಗ ಆರೋಪ ಮಾಡುತ್ತಿದ್ದಾರೆ. ಕಚೇರಿ ಅಧಿಕಾರಿಗಳು ಏನು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಆಗಿದೆ. ಕ್ರಮ ಕೈಗೊಂಡಿರುವುದರಿಂದಲೇ ಇದು ಬಂದಿದೆ ಎಂದು ತಿಳಿಸಿದರು.
ಸದನದ ತೀರ್ಮಾನಕ್ಕೆ ತಲೆಬಾಗುತ್ತೇನೆ: ನನ್ನ ಮೇಲೆ ಅವಿಶ್ವಾಸ ನಿಲುವಳಿ ಮಂಡಿಸುವುದು ಸದನಕ್ಕೆ ಬಿಟ್ಟ ವಿಚಾರ. ಬಹುಮತ ಇದೆಯೋ ಇಲ್ಲವೋ. ಅದು ಸರ್ಕಾರ ತೀರ್ಮಾನ ಮಾಡುತ್ತದೆ. ಸದನ ಏನು ತೀರ್ಮಾನ ಮಾಡುತ್ತದೋ ಅದನ್ನು ನಾನು ಪಾಲಿಸುತ್ತೇನೆ ಎಂದು ಹೇಳಿದರು.
ಈವರೆಗೆ ಒಬ್ಬರೇ ಒಬ್ಬ ಸಭಾಪತಿ ಮೇಲೆ ಅವಿಶ್ವಾಸ ನಿಲುವಳಿ ಮಂಡಿಸಿಲ್ಲ. ಶಂಕರಮೂರ್ತಿ ಮೇಲೆ ಮಾತ್ರ ಈ ಹಿಂದೆ ಅವಿಶ್ವಾಸ ನಿಲುವಳಿ ಮಂಡಿಸಲಾಗಿತ್ತು. ಆದರೆ, ಅದು ಬಿದ್ದು ಹೋಗಿತ್ತು. ಅವಿಶ್ವಾಸ ನಿಲುವಳಿ ಮಂಡಿಸಿದರೆ ಅದನ್ನು ಸದನ ತೀರ್ಮಾನ ಮಾಡುತ್ತದೆ. ಸದನದ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದರು.

